CHANDRAYANNA-2 In Kannada

Chandrayaan-2
Chandrayaan-2 ಬಳಿಕ ಚಂದ್ರನಲ್ಲಿ ರಾತ್ರಿ ಶುರು; ವಿಕ್ರಂ ಲ್ಯಾಂಡರ್ನೊಂದಿಗೆ ಸಂಪರ್ಕ ಅಸಾಧ್ಯವೆನ್ನುವ ವಿಜ್ಞಾನಿಗಳು
ನೋಬೆಲ್ ವಿಜೇತ ವಿಜ್ಞಾನಿ ಸೆರ್ಗೆ ಹರೋಚೆ ಅವರು ಇಸ್ರೋ ಪ್ರಯತ್ನ ಫಲಗೂಡಬಹುದೆಂಬ ನಿರೀಕ್ಷೆಯಲ್ಲಿದ್ದಾರೆ. ಈ ಯೋಜನೆ ಬಗ್ಗೆ ಇರುವ ನಿರೀಕ್ಷೆ ಹಾಗೂ ಅತಿಯಾದ ಮಾಧ್ಯಮ ಪ್ರಚಾರವು ವಿಜ್ಞಾನಿಗಳನ್ನು ಒತ್ತಡಕ್ಕೆ ಸಿಲುಕಿಸಿದೆ ಎಂಬುದು ಇವರ ಅನಿಸಿಕೆ.
ಭಾರತದ ಮಹತ್ವಾಕಾಂಕ್ಷಿ ಚಂದ್ರಯಾನ-2 ಯೋಜನೆಯ ಒಂದು ಭಾಗವಾಗಿರುವ ವಿಕ್ರಮ್ ಎಂಬ ಲ್ಯಾಂಡರ್ ರೋಬೋ ಕೊನೆ ಕ್ಷಣದಲ್ಲಿ ಸಂಪರ್ಕ ಕಳೆದುಕೊಂಡಿತ್ತು. ಈ ಲ್ಯಾಂಡರ್ನೊಂದಿಗೆ ಸಂಪರ್ಕ ಸ್ಥಾಪಿಸಲು ಇಸ್ರೋ ಹಾಗೂ ಅಮೆರಿಕದ ನಾಸಾ ಸತತ ಪ್ರಯತ್ನ ನಡೆಸುತ್ತಿವೆ. ಆದರೆ ಈವರೆಗೆ ವಿಕ್ರಂ ಲ್ಯಾಂಡರ್ನೊಂದಿಗೆ ಸಂಪರ್ಕ ಸಾಧ್ಯವಾಗಿಲ್ಲ. ಲ್ಯಾಂಡರ್ ಸಂಪರ್ಕಿಸುವ ಅವಕಾಶ ಸೆ. 20ರವರೆಗೆ ಮಾತ್ರ ಇರುತ್ತದೆ. ಸೆ. 21ರ ನಂತರ ಅದರ ಸಂಪರ್ಕ ಅಸಾಧ್ಯವಾಗಬಹುದು ಎಂಬುದು ವಿಜ್ಞಾನಿಗಳ ಅಭಿಪ್ರಾಯ.
ಸೆಪ್ಟೆಂಬರ್ 20 ಅಥವಾ 21ರ ವೇಳೆಗೆ ಚಂದ್ರನಲ್ಲಿ ಹಗಲು ಮುಕ್ತಾಯಗೊಳ್ಳುತ್ತದೆ. ಅಂದರೆ, ಸೂರ್ಯನ ಕಿರಣಗಳು ಇಲ್ಲಿಗೆ ಬರುವುದಿಲ್ಲ. ಹೀಗಾಗಿ, ಲ್ಯಾಂಡರ್ ಕಾರ್ಯನಿರ್ವಹಣೆಗೆ ಅತ್ಯಗತ್ಯವಾಗಿರುವ ಸೌರಶಕ್ತಿ ಸಿಗುವುದಿಲ್ಲ.
ಚಂದ್ರನಲ್ಲಿ ಒಂದು ಹಗಲು ದಿನವೆಂದರೆ ಸುಮಾರು 14 ಭೂಮಿಯ ದಿನಗಳಿಗೆ ಸಮ. ಹಾಗೆಯೇ, ಚಂದ್ರನಲ್ಲಿ ಒಂದು ರಾತ್ರಿ ಎಂದರೆ ಅದು 14 ಭೂಮಿಯ ರಾತ್ರಿಗಳಿಗೆ ಸಮವಾಗಿರುತ್ತದೆ. ರಾತ್ರಿಯ ಅವಧಿ ಶುರುವಾದಾಗ ಚಂದ್ರನ ಮೇಲ್ಮೈನ ತಾಪಮಾನ ಕಡಿಮೆಯಾಗುತ್ತಾ ಹೋಗುತ್ತದೆ. ಸುಮಾರು -238 ಡಿಗ್ರಿ ಸೆಲ್ಸಿಯಸ್ ಹವಾಮಾನ ಇರುತ್ತದೆ. ಅಂದರೆ ನಮ್ಮ ಭೂಮಿಯ ಅಂಟಾರ್ಟಿಕಾ ಖಂಡದಲ್ಲಿರುವುದಕ್ಕಿಂತಲೂ ಐದಾರು ಪಟ್ಟು ಹೆಚ್ಚು ಶೀತ ಇಲ್ಲಿರುತ್ತದೆ. ಇಷ್ಟು ಶೀತ ವಾತಾವರಣದಲ್ಲಿ ಲ್ಯಾಂಡರ್ ರೋಬೋ ಕಾರ್ಯ ನಿರ್ವಹಿಸುವುದು ಅಸಾಧ್ಯ. ಅಷ್ಟೇ ಅಲ್ಲ, ಅದರ ಉಪಕರಣಗಳು ಹಾಳಾಗುವ ಸಂಭವವೇ ಹೆಚ್ಚು. ಇದೇ ಹಿನ್ನೆಲೆಯಲ್ಲಿ ಲ್ಯಾಂಡರ್ ಮತ್ತು ರೋವರ್ನ ಆಯುಸ್ಸನ್ನು 14 ದಿನಗಳಿಗೆ ಲೆಕ್ಕ ಹಾಕಿ ಕಳುಹಿಸಲಾಗಿತ್ತು.
ಇದೇ ವೇಳೆ, ನಾಸಾ ಕೂಡ ವಿಕ್ರಂ ಲ್ಯಾಂಡರ್ನೊಂದಿಗೆ ಸಂಪರ್ಕ ಸ್ಥಾಪಿಸಲು ಶತಪ್ರಯತ್ನ ಮಾಡುತ್ತಿದೆ. ಡೀಪ್ ಸ್ಪೇಸ್ ನೆಟ್ವರ್ಕ್ನ ಕ್ಯಾಲಿಪೋರ್ನಿಯಾ ಸ್ಟೇಷನ್ನಿಂದ ವಿಕ್ರಂ ಲ್ಯಾಂಡರ್ ಸಂಪರ್ಕಕ್ಕೆ ಯತ್ನಿಸಲಾಗುತ್ತಿದೆ ಎಂದು ಅಮೆರಿಕಾದ ಖಗೋಳ ತಜ್ಞ ಸ್ಕಾಟ್ ಟಿಲ್ಲೆ ಹೇಳಿದ್ಧಾರೆ.
ಸೆ. 7ರಂದು ಚಂದ್ರನ ಕಕ್ಷೆಯಿಂದ ಚಂದ್ರನ ಅಂಗಳಕ್ಕೆ ಇಳಿಯುವ ವೇಳೆ ಇನ್ನು 400 ಮೀಟರ್ ಎತ್ತರಕ್ಕೆ ಇಳಿಯುವಷ್ಟರಲ್ಲಿ ಲ್ಯಾಂಡರ್ ರೋಬೋದ ಸಂಪರ್ಕ ಕಡಿತಗೊಂಡಿತ್ತು. ನಿಗದಿಯಾದಂತೆ ಅವರು ಸಾಫ್ಟ್ ಲ್ಯಾಂಡ್ ಆಗದೇ ನೆಲದ ಮೇಲೆ ಅಪ್ಪಳಿಸಿತ್ತು. ಸೆ. 10ರಂದು ಆರ್ಬಿಟರ್ ಮೂಲಕ ಲ್ಯಾಂಡರ್ ಅನ್ನು ಪತ್ತೆ ಹಚ್ಚಲಾಯಿತು. ಆದರೆ, ನೆಲಕ್ಕೆ ಅಪ್ಪಳಿಸಿದ ಪರಿಣಾಮ ಲ್ಯಾಂಡರ್ ರಚನೆಯೇ ಬಾಗಿ ಹೋಗಿತ್ತು. ಭೂಕೇಂದ್ರದಿಂದ ಅದರ ಸಂಪರ್ಕಕ್ಕೆ ಮಾಡಿದ ಪ್ರಯತ್ನಗಳು ಈವರೆಗೆ ಯಶಸ್ವಿಯಾಗಿಲ್ಲ.
ಆದರೆ, ನೋಬೆಲ್ ವಿಜೇತ ವಿಜ್ಞಾನಿ ಸೆರ್ಗೆ ಹರೋಚೆ ಅವರು ಇಸ್ರೋ ಪ್ರಯತ್ನ ಫಲಗೂಡಬಹುದೆಂಬ ನಿರೀಕ್ಷೆಯಲ್ಲಿದ್ದಾರೆ. ಈ ಯೋಜನೆ ಬಗ್ಗೆ ಇರುವ ನಿರೀಕ್ಷೆ ಹಾಗೂ ಅತಿಯಾದ ಮಾಧ್ಯಮ ಪ್ರಚಾರವು ವಿಜ್ಞಾನಿಗಳನ್ನು ಒತ್ತಡಕ್ಕೆ ಸಿಲುಕಿಸಿದೆ ಎಂಬುದು ಇವರ ಅನಿಸಿಕೆ.
“ನಿಮಗೆ ಗೊತ್ತಿಲ್ಲದ ವಿಚಾರವನ್ನು ಅರಸಿ ಹೋಗುವುದೇ ವಿಜ್ಞಾನ. ಇದರಲ್ಲಿ ನಿಮಗೆ ಅಚ್ಚರಿಗಳು ಕಾದಿರುತ್ತವೆ. ಕೆಲವೊಮ್ಮೆ ಒಳ್ಳೆಯ ಅಚ್ಚರಿಗಳಿರುತ್ತವೆ. ಕೆಲವೊಮ್ಮೆ ನಿರಾಸೆ ಕಾದಿರುತ್ತವೆ. ವೈಫಲ್ಯ ಎದುರಾದಾಗ ಅದರೊಂದಿಗೆ ಬಹುದೊಡ್ಡ ನಿರಾಸೆಯನ್ನು ಎದುರಿಸಬೇಕಾಗುತ್ತದೆ” ಎಂದು 75 ವರ್ಷದ ಹರೋಚೆ ಹೇಳುತ್ತಾರೆ.