Karnataka River in Kannada(ಕರ್ನಾಟಕದ ನದಿಗಳು) Part-03

Feb 18, 2022 12:05 pm By Admin

ಕರ್ನಾಟಕದ ನದಿಗಳು ಮತ್ತು ಜಲಾನಯನ ಪ್ರದೇಶಗಳು

ಪೂರ್ವಾಭಿಮುಖವಾಗಿ ಹರಿಯುವ ನದಿಗಳು

ಕೃಷ್ಣಾ ನದಿ

ಕೃಷ್ಣಾ ನದಿ ಮಹಾರಾಷ್ಟ್ರ, ಕರ್ನಾಟಕ ತೆಲಂಗಾಣ ಮತ್ತು ಆಂಧ್ರಪ್ರದೇಶ ರಾಜ್ಯಗಳಲ್ಲಿ ಪ್ರವಹಿಸುತ್ತದೆ. ಕರ್ನಾಟಕ ರಾಜ್ಯದಲ್ಲಿ ಇದು ಸುಮಾರು 483 ಕಿ.ಮಿ ಉದ್ದ ಹರಿಯುತ್ತದೆ. ಕೃಷ್ಣಾ ನದಿ ದಕ್ಷಿಣ ಭಾರತದ ಎರಡನೆಯ ದೊಡ್ಡ ನದಿಯಾಗಿದೆ. ಈ ನದಿ ಮಹಾರಾಷ್ಟ್ರದ ಪಶ್ಚಿಮ ಘಟ್ಟದ ಮಹಾದೇವ ಪರ್ವತ ಶ್ರೇಣಿಯಲ್ಲಿ ಮಹಾಬಲೇಶ್ವರದ ಹತ್ತಿರ ಉಗಮವಾಗಿ ಸುಮಾರು 1392 ಕಿ.ಮಿ.ಗಳಷ್ಟು ಹರಿದು ಆಂಧ್ರಪ್ರದೇಶ‍ದ ಹಂಸಲಾದೀವಿಯಲ್ಲಿ ಬಂಗಾಳ ಕೊಲ್ಲಿಯನ್ನು ಸೇರುತ್ತದೆ. ಇದರ ಮುಖ್ಯವಾದ ಉಪನದಿಗಳೆಂದರೆ ತುಂಗಭದ್ರಾ , ಕೊಯ್ನಾ, ಭೀಮಾ , ಮಲಪ್ರಭಾ ಮತ್ತು ಘಟಪ್ರಭಾ

ಕೃಷ್ಣಾ ನದಿಯ ಒಟ್ಟು ಜಲಾನಯನ ಪ್ರದೇಶ ಸುಮಾರು 2,60,000 ಚದರ ಕಿ.ಮಿ. ಇದರಲ್ಲಿ ಮಹಾರಾಷ್ಟ್ರದಲ್ಲಿ 68,000 ಚ.ಕಿ.ಮೀ ಕರ್ನಾಟಕದಲ್ಲಿ 1,12,600 ಚ.ಕಿ.ಮೀ ಹಾಗು ಆಂಧ್ರ ಪ್ರದೇಶದಲ್ಲಿ 75,600 ಚ.ಕಿ.ಮೀ ವ್ಯಾಪಿಸಿದೆ.ಕೃಷ್ಣಾನದಿಗೆ ವಿಜಯಪುರದ ಬಳಿ ಆಲಮಟ್ಟಿ ಅಣೆಕಟ್ಟು ನಿರ್ಮಿಸಲಾಗಿದೆ, ಇದರ ಮತ್ತೊಂದು ಹೆಸರು ಲಾಲ್ಬಹಾದ್ದೂರ್ ಶಾಸ್ತ್ರಿ ಅಣೆಕಟ್ಟು. ಹಾಗೆಯೇ ಯಾದಗಿರಿಯ ನಾರಾಯಣಪುರದ ಬಳಿ ಸಹ ಕೃಷ್ಣಾನದಿಗೆ ನಾರಾಯಣಪುರ ಅಣೆಕಟ್ಟನ್ನು ನಿರ್ಮಿಸಲಾಗಿದ್ದು ಅದರ ಮತ್ತೊಂದು ಹೆಸರು ಬಸವಸಾಗರ.

ಬಾಗಲಕೋಟೆಯ ಕೂಡಲಸಂಗಮದಲ್ಲಿ ಮಲಪ್ರಭಾ, ಘಟಪ್ರಭಾ ಮತ್ತು ಭೀಮಾ ನದಿಗಳು ಸಂಗಮಹೊಂದುತ್ತವೆ.

ಕೃಷ್ಣಾ ನದಿಯ ಪ್ರಮುಖ ಉಪನದಿಗಳು ಮತ್ತು ಅವುಗಳ ಜಲಾನಯನ ಪ್ರದೇಶಗಳ ವಿಸ್ತೀರ್ಣ

ಘಟಪ್ರಭಾ 8829 ಚ.ಕಿ.ಮೀ, ಭೀಮಾ 70,614 ಚ.ಕಿ.ಮೀ, ತುಂಗಭದ್ರಾ 47,866 ಚ.ಕಿ.ಮೀ, ಮಲಪ್ರಭಾ 11549 ಚ.ಕಿ.ಮೀ

ಯೆರ್ಲಾ, ಪಂಚ್‍ಗಂಗಾ, ದೂಧ್‍ಗಂಗಾ, ಹಿರಣ್ಯಕೇಶಿ ಇವು ಕೃಷ್ಣಾನದಿಯ ಇತರ ಪ್ರಮುಖ ಉಪನದಿಗಳು

ಘಟಪ್ರಭಾ

ಘಟಪ್ರಭಾ ನದಿಯು ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯ ಅಂಬೋಳಿ ಬಳಿಯ ಸಹ್ಯಾದ್ರಿ ಪರ್ವತಶ್ರೇಣಿಯಲ್ಲಿ ಜನಿಸುತ್ತದೆ. 283 ಕಿ.ಮೀ ದೂರದಷ್ಟು ಹರಿದ ಬಳಿಕ ಬಾಗಲಕೋಟೆ ತಾಲೂಕಿನ ಕಲಾದಗಿ ಗ್ರಾಮದ ಬಳಿ ಕೃಷ್ಣಾ ನದಿಯನ್ನು ಸೇರುತ್ತದೆ.

ತಾಮ್ರಪರ್ಣಿ, ಹಿರಣ್ಯಕೇಶಿ, ಹಿರೇಹಳ್ಳ ಮತ್ತು ಮಾರ್ಕಂಡೇಯ ಇದರ ಪ್ರಮುಖ ಉಪನದಿಗಳು

ಬೆಳಗಾವಿ ಜಿಲ್ಲೆಯ ಗೋಕಾಕ್ ಬಳಿ ಘಟಪ್ರಭಾ ನದಿಯಿಂದ ಗೋಕಾಕ್ ಜಲಪಾತ ಸೃಷ್ಟಿಯಾಗಿದೆ. ಇದನ್ನು ಕರ್ನಾಟಕದ ನಯಾಗರ ಎನ್ನುವರು.

ಬೆಳಗಾವಿಯಲ್ಲಿ ಈ ನದಿಗೆ ಹಿಡ್ಕಲ್ ಜಲಾಶಯವನ್ನು ನಿರ್ಮಿಸಲಾಗಿದೆ.

ಮಲಪ್ರಭಾ ನದಿ

ಮಲಪ್ರಭಾ ನದಿಯು ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಕನಕುಂಬಿ ಗ್ರಾಮದ ಬಳಿ ಸಹ್ಯಾದ್ರಿ ಪರ್ವತಶ್ರೇಣಿಯಲ್ಲಿ ಹುಟ್ಟುತ್ತದೆ. 304 ಕಿಲೊಮೀಟರುಗಳವರೆಗೆ ಹರಿದು ಕೃಷ್ಣಾ ನದಿಯನ್ನು ಕೂಡಲ ಸಂಗಮದಲ್ಲಿ ಕೂಡುತ್ತದೆ. ಸಂಗಮದವರೆಗೆ ಇದರ ಜಲಾನಯನ ಪ್ರದೇಶದ ವಿಸ್ತೀರ್ಣ 11,549 ಚದರ ಕಿಲೊಮೀಟರುಗಳು.

ಮಲಪ್ರಭಾ ನದಿಗೆ ಅಡ್ಡಲಾಗಿ ಸವದತ್ತಿ ತಾಲೂಕಿನ ಮುನವಳ್ಳಿ ಗ್ರಾಮದ ಹತ್ತಿರ ನವಿಲುತೀರ್ಥದಲ್ಲಿ ಆಣೆಕಟ್ಟು ಕಟ್ಟಲಾಗಿದೆ. ಈ ಜಲಾಶಯಕ್ಕೆ ರೇಣುಕಾ ಜಲಾಶಯವೆಂದು ಕರೆಯಲಾಗುತ್ತದೆ. ಬೆಣ್ಣೆಹಳ್ಳ, ಹಿರೇಹಳ್ಳ ಮತ್ತು ತಾಸ್ ಈ ನದಿಯ ಪ್ರಮುಖ ಉಪನದಿಗಳಾಗಿವೆ.