LIBRARYIAN JOB IN KOPPAL

Sep 20, 2023 11:19 am By Admin

ಕೊಪ್ಪಳ ಜಿಲ್ಲಾ ವ್ಯಾಪ್ತಿಯಲ್ಲಿ 21 ಗ್ರಾಮ ಪಂಚಾಯತಿಯಲ್ಲಿ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಪಂಚಾಯತಿಗೆ ಒಂದರಂತೆ ಒಟ್ಟು 21 ಗ್ರಾಮ ಪಂಚಾಯತಿ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರಗಳ ಮೇಲ್ವಿಚಾರಕರ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಆಸಕ್ತ, ಅರ್ಹ ಅಭ್ಯರ್ಥಿಗಳು www.koppal.nic.in ವೆಬ್‌ಸೈಟ್‌ನಲ್ಲಿ ಅರ್ಜಿಯನ್ನು ಡೌನ್‌ಲೋಡ್ ಮಾಡಿಕೊಂಡು ಭರ್ತಿ ಮಾಡಿ, ಅಗತ್ಯ ದೃಢೀಕರಿಸಿದ ದಾಖಲೆಗಳೊಂದಿಗೆ ದಿನಾಂಕ 25/9/2023ರ ಸಾಯಂಕಾಲ 5.30 ರೊಳಗೆ ಸಲ್ಲಿಸಬೇಕು. ಅರ್ಜಿಗಳನ್ನು ಆಯ್ಕೆ ಸಮಿತಿಯ ಸದಸ್ಯ ಕಾರ್ಯದರ್ಶಿಗಳು ಹಾಗೂ ಉಪ ಕಾರ್ಯದರ್ಶಿಗಳು ಜಿಲ್ಲಾ ಪಂಚಾಯತ್ ಕೊಪ್ಪಳ ಇವರಿಗೆ ಸಲ್ಲಿಸಬೇಕು

ಜಿಲ್ಲೆಯ ಬಸರಿಹಾಳ, ಜೀರಾಳ, ಮೈಲಾಪುರ, ಮುನಿರಾಬಾದ್ ಡ್ಯಾಂ, ಅಂಟರಠಾಣ, ಗುಮಗೇರಾ, ಹಾಬಲಕಟ್ಟಿ, ಹಿರೇನಂದಿಹಾಳ, ಕೇಸೂರು, ಶಿರಗುಂಪಿ, ತುಮರಿಕೊಪ್ಪ, ಸಂಕನೂರು, ನೇಲಜೇರಿ, ಜಂಗಮರಕಲ್ಗುಡಿ, ಸಣಾಪುರ, ಹಾಲವರ್ತಿ, ಕಲಕೇರಿ, ವಣಬಳ್ಳಾರಿ, ಬಿಳೇಕಲ್, ಬೋದೂರು, ತುಮ್ಮರಗುದ್ದಿ ಗ್ರಾಮ ಪಂಚಾಯಿತಿಗಳಲ್ಲಿ ಹುದ್ದೆಗಳು ಖಾಲಿ ಇವೆ.

ಶೈಕ್ಷಣಿಕ ವಿದ್ಯಾರ್ಹತೆ; ಅರ್ಜಿಗಳನ್ನು ಸಲ್ಲಿಕೆ ಮಾಡುವ ಅಭ್ಯರ್ಥಿಗಳು ದ್ವಿತೀಯ ಪದವಿ ಪೂರ್ವ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು ಮತ್ತು ಸರ್ಟಿಫಿಕೇಷನ್ ಕೋರ್ಸ್ ಇನ್ ಲೈಬ್ರರಿ ಸೈನ್ಸ್ ಪ್ರಮಾಣ ಪತ್ರ ಪಡೆದಿರತಕ್ಕದ್ದು ಹಾಗೂ ಕನಿಷ್ಠ 3 ತಿಂಗಳು ಕಂಪ್ಯೂಟರ್ ಕೋರ್ಸ್‌ನಲ್ಲಿ ಉತ್ತೀರ್ಣರಾಗಿರಬೇಕು. ಒಂದು ವೇಳೆ ಸರ್ಟಿಫಿಕೇಷನ್ ಕೋರ್ಸ್ ಇನ್ ಲೈಬ್ರರಿ ಸೈನ್ಸ್ ಪದವಿ ಪಡೆದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸದಿದ್ದಲ್ಲಿ ಪಿಯುಸಿ ಪರೀಕ್ಷೆಯಲ್ಲಿ ಅಭ್ಯರ್ಥಿಯು ಗಳಿಸಿದ ಅಂಕಗಳನ್ನು ಆಧರಿಸಿ ಅಧಿಸೂಚಿಸಿದ ಖಾಲಿ ಹುದ್ದೆಗಳಿಗೆ ಮೀಸಲಾತಿ ಬಿಂದುವಿನಂತೆ ಆಯ್ಕೆಗೆ ಪರಿಗಣಿಸಲಾಗುವುದು. ಈ ವಿದ್ಯಾರ್ಹತೆಯನ್ನು ಅಧಿಸೂಚನೆ ಹೊರಡಿಸುವ ದಿನಾಂಕಕ್ಕೆ ಮುಂಚಿತವಾಗಿ ಹೊಂದಿರಬೇಕು. ವಿದ್ಯಾರ್ಹತೆಯ ದಾಖಲಾತಿಗಳ ನೈಜತೆ ಬಗ್ಗೆ ಸಂಬಂಧಪಟ್ಟ ಸಕ್ಷಮ ಪ್ರಾಧಿಕಾರದಿಂದ ದೃಢಪಡಿಸಿಕೊಂಡ ನಂತರ ನೇಮಕಾತಿ ಆದೇಶ ನೀಡಲಾಗುವುದು. ಗ್ರಾಮ ಪಂಚಾಯತಿ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರಗಳ ಮೇಲ್ವಿಚಾರಕರ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ತತ್ಸಮಾನ ವಿದ್ಯಾರ್ಹತೆ ಹೊಂದಿದಲ್ಲಿ ಅರ್ಜಿ ಸಲ್ಲಿಸಲು ಅರ್ಹರಿರುವುದಿಲ್ಲ.

ಅರ್ಜಿ ಸಲ್ಲಿಸುವವರು ಸಂಬಂಧಪಟ್ಟ ಗ್ರಾಮ ಪಂಚಾಯತಿ ವ್ಯಾಪ್ತಿಯ ನಿವಾಸಿಯಾಗಿರತಕ್ಕದ್ದು. ಪರಂತು ಸಂಬಂಧಪಟ್ಟ ಗ್ರಾಮ ಪಂಚಾಯತಿ ವ್ಯಾಪ್ತಿಯ ನಿವಾಸಿ ಲಭ್ಯತೆ ಇಲ್ಲದೆ ಇದ್ದಲ್ಲಿ ಆಯಾ ತಾಲೂಕು ವ್ಯಾಪ್ತಿಯಲ್ಲಿನ ಬೇರೆ ಗ್ರಾಮ ಪಂಚಾಯತಿಯ ಅಭ್ಯರ್ಥಿಗಳನ್ನು ಆಯ್ಕೆಗೆ ಪರಿಗಣಿಸಲಾಗುವುದು. ಸಂಬಂಧಿಸಿದಂತೆ ಸಕ್ಷಮ ಪ್ರಾಧಿಕಾರವಾದ ತಹಶೀಲ್ದಾರ್ ಇವರಿಂದ ವಾಸಸ್ಥಳ ಪಮಾಣ ಪತ್ರವನ್ನು ಪಡೆದು ಸಲ್ಲಿಸತಕ್ಕದ್ದು. ಅರ್ಜಿಗಳನ್ನು ಸ್ವೀಕರಿಸಲು ನಿಗದಿಪಡಿಸಿದ ಕೊನೆಯ ದಿನಾಂಕ 25/9/2023ಕ್ಕೆ ಅಭ್ಯರ್ಥಿಯು 18 ವರ್ಷ ವಯಸ್ಸನ್ನು ಪೂರೈಸಿರತಕ್ಕದ್ದು ಹಾಗೂ ಗರಿಷ್ಠ ವಯೋಮಿತಿ ಸಾಮಾನ್ಯ ವರ್ಗ 35 ವರ್ಷ, 2ಎ/ 2ಬಿ/ 3ಎ/ 3ಬಿ 38 ವರ್ಷ. ಪ. ಜಾತಿ/ ಪ. ಪಂ/ ಪ್ರವರ್ಗ-1 40 ವರ್ಷಗಳು. ಅರ್ಜಿ ಸಲ್ಲಿಸುವವರು ಯಾವುದೇ ಅರ್ಜಿ ಶುಲ್ಕವನ್ನು ಪಾವತಿಸಬೇಕಿಲ್ಲ. ನಿಗದಿತ ನಮೂನೆಯಲ್ಲಿ ಜಾತಿ ಪ್ರಮಾಣ ಪತ್ರವನ್ನು ತಹಶೀಲ್ದಾರ್ ಅವರಿಂದ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕದೊಳಗಡೆ ಪಡೆದಿರಬೇಕು.

ಸಾಮಾನ್ಯ ಸೂಚನೆಗಳು

* ಅಭ್ಯರ್ಥಿಯು ತನ್ನ ಇತ್ತೀಚಿನ 2 ಪಾಸ್ ಪೋಟ್ ಸೈಜಿನ ಭಾವಚಿತ್ರಗಳನ್ನು ಲಗತ್ತಿಸಬೇಕು. ಭರ್ತಿ ಮಾಡಿದ ಅರ್ಜಿಯನ್ನು ಅಗತ್ಯ ದಾಖಲೆಗಳೊಂದಿಗೆ ಪತ್ರಾಂಕಿತ ಅಧಿಕಾರಿಯ ದೃಢೀಕರಣದೊಂದಿಗೆ ದ್ವಿ-ಪ್ರತಿಯಲ್ಲಿ ಸಲ್ಲಿಸುವುದು.

* ಕನಿಷ್ಠ 3 ತಿಂಗಳ ತರಬೇತಿ ಹೊಂದಿದ ಗಣಕಯಂತ್ರ ಪ್ರಮಾಣ ಪತ್ರ ಸಲ್ಲಿಸುವುದು. ಕಾನೂನು ಬಾಹಿರ/ ನೀತಿ ಬಾಹಿರ ಚಟುವಟಿಕೆಗಳಲ್ಲಿ ತೊಡಗಿದ್ದು ಕಂಡುಬಂದಿದ್ದಲ್ಲಿ ನೇಮಕಾತಿಗೆ ಅನರ್ಹರಾಗಿರುತ್ತಾರೆ.

* ಅರ್ಜಿಯಲ್ಲಿ ತಪ್ಪು/ ಸುಳ್ಳು ಮಾಹಿತಿ ನೀಡಿ ಉದ್ಯೋಗ ಪಡೆಯುವ ಅಭ್ಯರ್ಥಿಗಳನ್ನು ಯಾವುದೇ ಸಮಯದಲ್ಲಾದರೂ ವಜಾ ಮಾಡಲಾಗುತ್ತದೆ ಹಾಗೂ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು.

* ಅರ್ಜಿಯಲ್ಲಿ ನೀಡುವ ವಿಳಾಸ ಮತ್ತು ಮೋಬೈಲ್ ಸಂಖ್ಯೆಯೇ ಅಂತಿಮವಾಗಿದ್ದು, ಎಲ್ಲಾ ಪತ್ರ ವ್ಯವಹಾರಗಳನ್ನು ಅದೇ ವಿಳಾಸಕ್ಕೆ ಕಳುಹಿಸಿ ಕೊಡಲಾಗುವುದು. ನಂತರದಲ್ಲಿ ವಿಳಾಸ ಬದಲಾವಣೆ ಬಗ್ಗೆ ಯಾವುದೇ ಪತ್ರ ವ್ಯವಹಾರವನ್ನು ಪರಿಗಣಿಸಲಾಗುವುದಿಲ್ಲ.

* ಅಭ್ಯರ್ಥಿಗಳ ಅರ್ಹತೆಯ ವಿಷಯದಲ್ಲಿ ಆಯ್ಕೆ ಪ್ರಾಧಿಕಾರದ ನಿರ್ಧಾರವೇ ಅಂತಿಮವಾಗಿರುತ್ತದೆ. ಅಭ್ಯರ್ಥಿಯ ಹೆಸರು ಅಂತಿಮ ಆಯ್ಕೆ ಪಟ್ಟಿಯಲ್ಲಿ ಬಂದಿದೆ ಎಂಬುದರ ಆಧಾರದ ಮೇಲೆ ಅಭ್ಯರ್ಥಿಗೆ ನೇಮಕಾತಿಯ ಯಾವುದೇ ಹಕ್ಕು ದೊರೆಯುವುದಿಲ್ಲ.

* ರಾಜ್ಯ ಸರ್ಕಾರ ಅಥವಾ ಕೇಂದ್ರ ಸರ್ಕಾರದ ನೌಕರಿ ಸೇವೆಯಲ್ಲಿ ಇರುವ ಅಭ್ಯರ್ಥಿಗಳು ತಮ್ಮ ಇಲಾಖೆಯ ಮುಖ್ಯಸ್ಥರ ನಿರಾಕ್ಷೇಪಣಾ ಪತ್ರವನ್ನು ಹೊಂದಿರತಕ್ಕದ್ದು.

* ನೇಮಕಾತಿ ಪ್ರಕ್ರಿಯೆಯನ್ನು ಯಾವುದೇ ಸಂದರ್ಭದಲ್ಲಿ ಮುಂದೂಡುವ, ರದ್ದುಗೊಳಿಸುವ ಮತ್ತು ನಿರ್ಬಂಧನೆಗಳನ್ನು ಬದಲಾಯಿಸುವ ಅಧಿಕಾರವನ್ನು ನೇಮಕಾತಿ ಪ್ರಾಧಿಕಾರ ಹೊಂದಿರುತ್ತದೆ.

* ಈಗಾಗಲೇ ಪುರುಷ ಮತ್ತು ಮಹಿಳಾ ವ್ಯಕ್ತಿಯು ಎರಡನೆಯ ಮದುವೆಯಾಗಿದ್ದರೆ ಸಂಬಂಧಪಟ್ಟ ಸಕ್ಷಮ ಪ್ರಾಧಿಕಾರದಿಂದ ಪೂರ್ವಾನುಮತಿಯನ್ನು ಪಡೆಯದಿದ್ದರೆ ಅಂತಹ ನೇಮಕಾತಿಗೆ ಅರ್ಹರಾಗುವುದಿಲ್ಲ.