Mirabai Chanu

Jul 29, 2021 11:05 am By Admin


ಇದು 130 ಕೋಟಿ ಭಾರತೀಯರಿಗೆ ಅವಿಸ್ಮರಣೀಯ ಕ್ಷಣ. ಒಲಿಂಪಿಕ್ಸ್ ನಲ್ಲಿ ಪದಕ ಗೆಲ್ಲೋದೇ ಕಬ್ಬಿಣದ ಕಡಲೆ ಎಂಬಂತಿರೋ ಸ್ಥಿತಿಯಲ್ಲಿ ಭಾರತದ ಈ ಯುವ ಸಾಧಕಿ ಇಡೀ ದೇಶವೇ ಹೆಮ್ಮೆ ಪಡುವಂತಹ ಸಾಧನೆ ಮೆರೆದಿದ್ದಾರೆ. 49 ಕೆಜಿ ವೇಟ್ ಲಿಫ್ಟಿಂಗ್ ವಿಭಾಗದಲ್ಲಿ ಬೆಳ್ಳಿ ಪದಕಕ್ಕೆ ಕೊರಳೊಡ್ಡೋ ಮೂಲಕ ಇತಿಹಾಸವನ್ನ ಬರೆದಿದ್ದಾರೆ ಮಣಿಪುರದ ಛಲಗಾತಿ ಮೀರಾಭಾಯಿ ಚಾನು.!

ಟೋಕಿಯೋ ಒಲಿಂಪಿಕ್ಸ್ ನಲ್ಲಿ ಮೊದಲ ದಿನವೇ ರಾಷ್ಟ್ರಕ್ಕೇ ರಜತ ಸಂಭ್ರಮ ಮೂಡಿಸಿದ್ದಾರೆ ಮೀರಾಭಾಯಿ ಚಾನು. 49 ಕೆಜಿ ವಿಭಾಗದಲ್ಲಿ ಮೀರಾ ಭಾಯಿ ಒಟ್ಟು 202 ಕೆಜಿ ಭಾರ ಎತ್ತೋ ಮೂಲಕ ಬೆಳ್ಳಿಪದಕ ತಮ್ಮದಾಗಿಸಿಕೊಂಡಿದ್ದಾರೆ. ಇಲ್ಲಿ ಮೊದಲು ಸ್ನ್ಯಾಚ್ ವಿಭಾಗದಲ್ಲಿ 87 ಕೆಜಿ ಭಾರ ಎತ್ತಿದ ಮೀರಾ ಆನಂತರ ಕ್ಲೀನ್ ಅಂಡ್ ಜರ್ಕ್ ನಲ್ಲಿ 115 ಕೆಜಿ ಭಾರ ಲಿಫ್ಟ್ ಮಾಡೋ ಮೂಲಕ ಐತಿಹ್ಯ ಸೃಷ್ಟಿಗೆ ಕಾರಣರಾದರು.

ಟೋಕಿಯೋ ಇಂಟರ್ ನ್ಯಾಷನಲ್ ಫೋರಂನಲ್ಲಿ ನಡೆದ ಒಲಿಂಪಿಕ್ಸ್ ವೇಟ್ ಲಿಫ್ಟಿಂಗ್ ನ 49 ಕೆಜಿ ವಿಭಾಗದ ಸ್ಪರ್ದೆಯಲ್ಲಿ ಚಾನು ಮೊದಲ ಯತ್ನದಲ್ಲಿ 84 ಕೆಜಿ ಲಿಫ್ಟ್ ಮಾಡಿದರು. ಬಳಿಕ ತಮ್ಮ ಸಾಧನೆ ಇನ್ನಷ್ಟು ಇಂಪ್ರೂವ್ ಮಾಡಿಕೊಂಡ ಮೀರಾಭಾಯಿ ಚಾನು, ತಮ್ಮೆಲ್ಲಾ ಶಕ್ತಿ ಮೀರಿ 87 ಕೆಜಿ ಎತ್ತೋದರಲ್ಲಿ ಸಫಲರಾದರು. ಆದ್ರೆ, ಎದುರಾಳಿ ಚೀನಾದ ಝಿಹ್ಯೂಯ್ ಮೊದಲ ಪ್ರಯತ್ನದಲ್ಲೇ 88 ಕೆಜಿ ಭಾರ ಎತ್ತೋ ಮೂಲಕ ಮುನ್ನಡೆ ಸಾಧಿಸಿದರು. ಆ ಬಳಿಕ ಝಿಹ್ಯೂಯ್ ಮೂರನೇ ಯತ್ನದಲ್ಲಿ 94 ಕೆಜಿ ಭಾರ ಎತ್ತೋ ಮುಖಾಂತರ ನೂತನ ಒಲಿಂ ಪಿಕ್ಸ್ ದಾಖಲೆ ನಿರ್ಮಿಸಿದರು.

ಭಾರತದ ಮೀರಾಭಾಯಿ ಚಾನು, ಕ್ಲೀನ್ ಅಂಡ್ ಜರ್ಕ್ ನಲ್ಲಿ ಮೊದಲ ಯತ್ನದಲ್ಲಿ 115 ಕೆಜಿ ಭಾರ ಎತ್ತೋ ಮೂಲಕ ಭರವಸೆ ಮೂಡಿಸಿದರು. ಆನಂತರ ಇನ್ನೂ ಹೆಚ್ಚಿನ ಭಾರ ಅಂದ್ರೆ 117 ಕೆಜಿ ಎತ್ತೋಕೆ ಚಾನು ವಿಫಲರಾದರೂ,ಅಷ್ಟರಲ್ಲಾಗಲೇ ಇವರಿಗೆ ಬೆಳ್ಳಿ ಪದಕ ನಿಕ್ಕಿಯಾಗಿತ್ತು. ಒಟ್ಟಾರೆ, ಎರಡೂ ಲಿಫ್ಟ್ ಗಳಲ್ಲಿ ಒಟ್ಟು 202 ಕೆಜಿ ಭಾರ ಎತ್ತುವುದರೊಂದಿಗೆ ಪೋಡಿಯಂನ ಬಲತುದಿ ಯಲ್ಲಿ ನಿಂತ ಮೀರಾ ಭಾಯಿ ಚಾನು ರಜತ ಪದಕವನ್ನ ಕೊರಳಿಗೇರಿಸಿಕೊಂಡರು. ಸಿಲ್ವರ್ ಮೆಡಲ್ ಗೆ ಮುತ್ತಿಡೋ ಮೂಲಕ ಒಲಿಂಪಿಕ್ಸ್ ನಲ್ಲಿ ಮಹಿಳಾ ವೇಟ್ ಲಿಫ್ಟಿಂಗ್ ನಲ್ಲಿ ಭಾರತಕ್ಕೆ ಮೊಟ್ಟ ಮೊದಲ ಬೆಳ್ಳಿ ಪದಕ ತಂದುಕೊಟ್ಟರು.

ಇನ್ನು, ಸ್ನಾಚ್ ನಲ್ಲಿ94 ಕೆಜಿ, ಕ್ಲೀನ್ ಅಂಡ್ ಜರ್ಕ್ ನಲ್ಲಿ 116 ಕೆಜಿ.. ಹೀಗೆ ಒಟ್ಟು 210 ಕೆಜಿ ವೇಟ್ ಲಿಫ್ಟ್ ಮಾಡಿದ ಚೀನಾದ ಜೀ ಹ್ಯೂಯ್ ಹೌ, ಒಲಿಂಪಿಕ್ಸ್ ನೂತನ ದಾಖಲೆಯೊಂದಿಗೆ ಚೀನಾಗೆ ಮೊದಲ ಚಿನ್ನದ ಪದಕ ಗೆಲ್ಲಿಸಿಕೊಟ್ಟರು. ಸ್ನಾಚ್, ಕ್ಲೀನ್ ಅಂಡ್ ಜರ್ಕ್ ಹಾಗೂ ಒಟ್ಟು..ಹೀಗೆ ಮೂರೂ ಕೆಟಗಿರಿಯಲ್ಲಿ ಚೀನಾ ಚಿನ್ನದ ಪದಕ ವಿಜೇತೆ ಒಲಿಂಪಿಕ್ ದಾಖಲೆ ಬರೆದರು. ಹಾಗೆಯೇ ಎರಡೂ ವಿಭಾಗಗಳಲ್ಲಿ ಒಟ್ಟು 194 ಕೆಜಿ ಭಾರ ಎತ್ತಿದ ಇಂಡೋನೇಷ್ಯಾದ ವಿಂಡಿ ಕಾನ್ ಟಿಕಾ ಐಸಾಗೆ ಕಂಚಿನ ಪದಕ ದೊರೆಯಿತು.

2000ರಲ್ಲಿ ಸಿಡ್ನಿಯಲ್ಲಿ ನಡೆದ ಒಲಿಂಪಿಕ್ಸ್ ನ ವೇಟ್ ಲಿಫ್ಟಿಂಗ್ ನ 69 ಕೆಜಿ ವಿಭಾಗದಲ್ಲಿ ಕರ್ನಂ ಮಲ್ಲೇಶ್ವರಿ ಕಂಚು ಪದಕ ಗೆಲ್ಲೋ ಮೂಲಕ ದೇಶಕ್ಕೆ ಮೊದಲ ಮಿಂಚು ಹರಿಸಿದ್ದರು. ಈ ಮೂಲಕ ಭಾರತಕ್ಕೆ ಒಲಿಂಪಿಕ್ಸ್ ಪದಕ ತಂದುಕೊಟ್ಟ ಮೊಟ್ಟಮೊದಲ ಮಹಿಳಾ ಕ್ರೀಡಾಪಟು ಎಂಬ ಹಿರಿಮೆಗೆ ಕರ್ಣಂ ಭಾಜನರಾಗಿದ್ದರು. ಆನಂತರ 21 ವರ್ಷಗಳ ಕಾಲ ಒಲಿಂಪಿಕ್ಸ್ ನಲ್ಲಿ ಪದಕ ಅನ್ನೋದು ಮರೀಚಿಕೆಯಾಗೇ ಉಳಿ ದಿತ್ತು. ಇದೀಗ ವೇಟ್ ಲಿಫ್ಟಿಂಗ್ ನಲ್ಲಿ ಎರಡು ದಶಕಗಳ ಪದಕ ಬರವನ್ನ ನೀಗಿಸೋದರಲ್ಲಿ ಸಫಲವಾದ ಮಣಿಪುರ ಬಾಲೆ ಮೀರಾಭಾಯಿ ಚಾನು, ಇಡೀ ದೇಶಕ್ಕೇ ಕೀರ್ತಿ ತಂದಿದ್ದಾರೆ.

ಯಾವಾಗ ಮೀರಾಭಾಯಿ ಚಾನು ದೇಶಕ್ಕೆ ರಜತ ಗೆರೆ ಮೂಡಿಸಿದರೋ, ಇಡೀ ಭಾರತವೇ ಸಂಭ್ರಮದಲ್ಲಿ ಮುಳುಗಿದೆ. ರಜತನಾರಿಗೆ ದೇಶಾದ್ಯಂತ ಅಭಿನಂದನೆಗಳ ಮಹಾಪೂರವೇ ಹರಿದುಬಂದಿದೆ. ಬೆಳ್ಳಿಪದಕ ಗೆದ್ದ ಮೀರಾಭಾಯಿ ಚಾನು ಯಶಸ್ಸು ಇಡೀ ಭಾರತಕ್ಕೇ ಸ್ಪೂರ್ತಿ ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟರ್ ನಲ್ಲಿ ಹೆಮ್ಮೆಪಟ್ಟಿದ್ದಾರೆ. ಚಾನು ಅದ್ಭುತ ಪ್ರದರ್ಶನದಿಂದ ಭಾರತ ಉಲ್ಲಾಸಗೊಂಡಿದೆ ಎಂದು ಮೋದಿ ಹರ್ಷ ವ್ಯಕ್ತಪಡಿಸಿದ್ದಾರೆ. ಟೋಕಿಯೋ ಒಲಿಂಪಿಕ್ಸ್ ನಲ್ಲಿ ಮೆಡಲ್ ಟ್ಯಾಲಿ ಆರಂಭಿಸಿದ ಮೀರಾಭಾಯಿ ಚಾನುಗೆ ಹೃದಯಪೂವಕ ಅಭಿನಂದನೆಗಳು ಎಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಟ್ವೀಟ್ ಮಾಡಿದ್ದಾರೆ.

ಇನ್ನ, ಚಾನು ಸಾಧನೆ ಕೊಂಡಾಡಿರೋ ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್, ಮೊದಲ ದಿನದಲ್ಲೇ ಭಾರತದ ಮೊದಲ ಮೆಡಲ್ ಅಂತಾ ಖುಷಿ ವ್ಯಕ್ತಪಡಿಸಿದ್ದಾರೆ. ಅಲ್ಲದೇ ನಿಮ್ಮ ಬಗ್ಗೆ ಭಾರತಕ್ಕೆ ಹೆಮ್ಮೆ ಮೀರಾ ಎಂದು ಠಾಕೂರ್ ಅಭಿನಂದಿಸಿದ್ದಾರೆ. ಕೇಂದ್ರದ ಮಾಜಿ ಕ್ರೀಡಾ ಸಚಿವ ಕಿರಣ್ ರಿಜೂಜು ಕೂಡ ಚಾನುಗೆ ಟ್ವೀಟರ್ ನಲ್ಲಿ ಅಭಿನಂದನೆ ಸಲ್ಲಿಸಿದ್ದಾರೆ. ಟೋಕಿಯೋ ಒಲಿಂಪಿಕ್ಸ್ ನಲ್ಲಿ ಭಾರತ ಮೊದಲ ಮೆಡಲ್ ಗಿಟ್ಟಿಸಿದೆ. ಇದಕ್ಕಾಗಿ ಮೀರಾಭಾಯಿ ಚಾನುಗೆ ಕಂಗ್ರಾಚುಲೇಷನ್..ಚಿಯರ್ ಇಂಡಿಯಾ.. ಎಂದು ರಿಜೂಜು ಪ್ರಶಂಸಿದ್ದಾರೆ. ಇದಲ್ಲದೆ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಕೂಡ ಚಾನು ಸಾಧನೆಗೆ ಹೆಮ್ಮೆ ವ್ಯಕ್ತಪಡಿಸಿದ್ದಾರೆ. ಭಾರತದ ಏಕಮಾತ್ರ ಒಲಿಂಪಿಕ್ಸ್ ಗೋಲ್ಡ್ ಮೆಡಲಿಸ್ಟ್ ಅಭಿನವ್ ಬಿಂದ್ರಾ ಕೂಡ ಸಾಮಾಜಿಕ ಜಾಲತಾಣಗಳಲ್ಲೇ ಮೀರಾ ಭಾಯಿ ಚಾನುಗೆ ಅಭಿನಂದಿಸಿದ್ದಾರೆ. ದೀರ್ಘಕಾಲ ನೆನೆಪಿಸಿಕೊಳ್ಳಬೇಕಾದ ಸ್ಪೂರ್ತಿದಾಯಕ ಸಾಧನೆ ಮುಂದಿನ ತಲೆಮಾರುಗಳಿಗೆ ಪ್ರೋತ್ಸಾಹ ದಾಯಕ ಎಂದು ಬಿಂದ್ರಾ ಹೆಮ್ಮೆ ವ್ಯಕ್ತಪಡಿಸಿದ್ದಾರೆ. ಇಷ್ಟಲ್ಲದೇ, ಸಚಿನ್ ತೆಂಡೂಲ್ಕರ್, ವೀರೇಂದ್ರ ಸೆಹ್ವಾಗ್, ವಿವಿಎಸ್ ಲಕ್ಷ್ಮಣ್ ಸೇರಿದಂತೆ ಕ್ರಿಕೆಟ್ ತಾರೆಗಳು ಕೂಡ ಮೀರಾಭಾಯಿ ಚಾನುಗೆ ಅಭಿನಂದನೆ ಸಲ್ಲಿಸಿದ್ದಾರೆ.


ಬಡತನದ ‘ಭಾರ’ದಲ್ಲೇ ಬೆಳ್ಳಿ ‘ಎತ್ತಿದ’ ಮೀರಾ!ಯಾವುದೇ ಕ್ರೀಡಾಪಟುವಿಗೆ ಒಲಿಂಪಿಕ್ಸ್ ನಲ್ಲಿ ಪದಕ ಗೆಲ್ಲೋದು ಅಂದ್ರೆ ಅದೊಂದು ಜೀವಮಾನದ ಕನಸು. 2016ರಲ್ಲೇ ರಿಯೋ ಒಲಿಂ ಪಿಕ್ಸ್ ನಲ್ಲಿ ಪದಕ ಹೊಂಗನಸು ಹೊತ್ತಿದ್ದ ಮೀರಾಭಾಯಿ, ಅದೇಕೋ ಏನೋ ಅಲ್ಲಿ ವಿಫಲರಾಗಿಬಿಟ್ಟಿದ್ದರು. ಗಾಯದ ಸಮಸ್ಯೆಯೂ ಆಗ ಮೀರಾರನ್ನ ಭಾದಿಸಿತ್ತು. ಆಗ ಕೆಲಕಾಲ ಖಿನ್ನತೆಗೊಳಗಾದ ಮೀರಾಭಾಯಿ, ಆ ಬಳಿಕ ಫೀನಿಕ್ಸ್ ಹಕ್ಕಿಯಂತೆ ಮೇಲೆದ್ದರು. ಸತತ ಪರಿಶ್ರಮ, ಇಚ್ಛಾಶಕ್ತಿ ಫಲ ಎಂಬಂತೆ ಮುಂದಿನ ವರ್ಷಗಳಲ್ಲಿ ಸಾಧನೆ ಮೇಲೆ ಸಾಧನೆ ಮಾಡುತ್ತಾ ಯಶಸ್ಸಿನ ಮೆಟ್ಟಿಲೇರುತ್ತಾ ಬಂದರು. ಅಷ್ಟಕ್ಕೂ ಮೀರಾಭಾಯಿ ಚಾನೂ ಎಂಬ ಭಾರತೀಯ ರಜತಕುವರಿಗೆ ಸ್ಫೂರ್ತಿ ಚಿಲುಮೆಯಾಗಿದ್ದು ಮಹಿಳಾ ವೇಟ್ ಲಿಫ್ಟಿಂಗ್ ನ ಮತ್ತೊಂದು ದಂತಕತೆ ಕುಂಜಾರಾಣಿ ದೇವಿ. ಮಣಿಪುರದವರೇ ಆದ ಕುಂಜಾರಾಣಿ, ವಿಶ್ವ ವೇಟ್ ಲಿಫ್ಟಿಂಗ್ ಚಾಂಪಿಯನ್ ಶಿಪ್ ನಲ್ಲಿ ಸತತ ಏಳು ಬಾರಿ ಪದಕ ವಿಜೇತೆ.

ಇನ್ನ, ದೇಶದ ಬಾನಂಗಳದಲ್ಲಿ ರಜತಗೆರೆ ಮೂಡಿಸಿರೋ ಮೀರಾಭಾಯಿ ಚಾನು, ಹುಟ್ಟಿದ್ದು ಮಣಿಪುರದ ಇಂಫಾಲ್ ಬಳಿ ಇರೋ ಸಣ್ಣ ಹಳ್ಳಿಯೊಂದರಲ್ಲಿ. ಆರು ಮಂದಿ ಸೋದರ-ಸೋದರಿಯರ ಬಡಕುಟುಂಬದಲ್ಲಿ. ಎಷ್ಟು ಬಡತನ ಎಂದ್ರೆ ಮನೆಮಕ್ಕಳಿಗೆ ವಾರದಲ್ಲಿ ಹಾಲು ಕುಡಿಯೋಕೆ ಸಾಧ್ಯವಾಗ್ತಿದ್ದೇ ಎರಡು ಸಲ. ಆದ್ರೆ, ಚಿಕ್ಕವಯಸ್ಸಿನಲ್ಲೂ ಕಟ್ಟಿಗೆ ಹೊರುತ್ತಿದ್ದ ಸಂದರ್ಭದಲ್ಲಿ ಎಲ್ಲರಿಗಿಂತ ಹೆಚ್ಚು ತೂಕದ ಕಟ್ಟಿಗೆ ಹೊರೋ ಮೂಲಕ ಗ್ರಾಮಸ್ಥರ ಅಚ್ಚರಿಗೆ ಕಾರಣವಾಗಿದ್ದಳು ಬಾಲಕಿ ಮೀರಾಭಾಯಿ ಚಾನು.

ಒಮ್ಮೆ ಇಂಫಾಲ್ ಗೆ ತಂದೆ ಜತೆ ಹೋಗಿದ್ದ ಪುಟ್ಟಬಾಲೆ ಮೀರಾಗೆ ಅಲ್ಲೊಂದು ಮೈದಾನದಲ್ಲಿ ಜನ ಮುತ್ತಿಕೊಂಡಿರೋದು ಕಂಡುಬಂತು. ಕುತೂಹಲದಿಂದ ತಂದೆಯನ್ನ ಅತ್ತ ಕರೆದೊಯ್ದ ಬಾಲಕಿ ಮೀರಾಗೆ ಅಲ್ಲಿ ಕಂಡಿದ್ದು ವೇಟ್ ಲಿಫ್ಟಿಂಗ್ ಕಾಂಪಿಟಿಷನ್. ಜತೆಗೆ ಅಲ್ಲಿ ಒಬ್ಬ ತಾರೆಯೊಬ್ಬರನ್ನ ಮುತ್ತಿಕೊಂಡಿದ್ದ ಜನ , ಜಯಕಾರ ಹಾಕುತ್ತಿದ್ದರು. ಆಕೆ ಬೇರಾರೂ ಅಲ್ಲ, ಆಗಿನ ಪ್ರಖ್ಯಾತ ವೇಟ್ ಲಿಫ್ಟರ್ ಕುಂಜಾರಾಣಿ ದೇವಿ. ಆಕೆಗೆ ಇದ್ದ ಜನಪ್ರಿಯತೆ ಕಂಡ ಬಾಲಕಿ ಮೀರಾಗೂ ಆಕೆಯಂತಾಗಬೇಕೆಂಬ ಆಸೆಯುಂಟಾಯಿತು. ಮನೆಗೆ ವಾಪಸಾದ ಬಳಿಕ ತಂದೆ ಬಳಿ ತಾನೂ ವೇಟ್ ಲಿಫ್ಟರ್ ಆಗಬೇಕೆಂಬ ಬಯಕೆ ತೋಡಿಕೊಂಡಳು ಬಾಲಕಿ ಮೀರಾ. ಬಡತನವಿದ್ರೂ ಮಗಳಿಗೆ ನಿರಾಸೆ ಮಾಡ ಬಾರದೆಂದ ತಂದೆ, ಅಲ್ಲಿಂದ 22 ಕಿಲೋಮೀಟರ್ ದೂರದ ಇಂಫಾಲ್ ನ ತರಬೇತಿ ಕೇಂದ್ರಕ್ಕೆ ಸೇರಿಸಲು ಒಪ್ಪಿದರು. ಇದು 2007ರ ಸಮಯ.

ಹೀಗೆ ಕುಂಜಾರಾಣಿಯನ್ನೇ ಸ್ಫೂರ್ತಿದೇವತೆಯನ್ನಾಗಿ ತೆಗೆದುಕೊಂಡ ಬಾಲಕಿ ಮೀರಾಭಾಯಿ, ಸತತ ಪರಿಶ್ರಮದೊಂದಿಗೆ ಅಭ್ಯಾಸನಿರತ ಳಾದಳು. ಆದ್ರೆ, ಇವಳ ದೈಹಿಕ ಸದೃಢತೆಗೆ ಕೋಚ್ ಮಾಂಸ, ಪ್ರೊಟೀನ್ ಯುಕ್ತ ಹಣ್ಣು ಸೇರಿದಂತೆ ಡಯಟ್ ಚಾರ್ಟ್ ಅನ್ನ ಕೊಟ್ಟಾಗ, ಬಡತನದಿಂದ ನಲುಗಿದ್ದ ಚಾನುಗೆ ಏನು ಮಾಡಬೇಕೆಂಬುದೇ ತೋಚಲಿಲ್ಲ. ಆದ್ರೂ, ಛಲಬಿಡದೇ ಸತತ ಅಭ್ಯಾಸದೊಂದಿಗೆ ತರಬೇತಿ ಪಡೆದ ಮೀರಾಭಾಯಿ, ಎಷ್ಟೋ ಸಮಯ ರಾತ್ರಿ ಹಸಿವಿನಲ್ಲೇ ಕಾಲ ಕಳೆದರು. ಓದು ಮುಂದುವರೆಸೋದು ಕಷ್ಟವಾಯಿತು.

ಮೀರಾ ಹೆಜ್ಜೆ ಗುರುತು-ಹೆಡರ್2011- ಸೌತ್ ಏಷ್ಯನ್ ಜೂನಿಯರ್ ಗೇಮ್ಸ್- ಚಿನ್ನ2013- ಜೂನಿಯರ್ ನ್ಯಾಷನಲ್ ಚಾಂಪಿಯನ್2014- ಕಾಮನ್ ವೆಲ್ತ್ ಗೇಮ್ಸ್ ಬೆಳ್ಳಿಪದಕ

ಆದ್ರೂ ಹಠಬಿಡದೇ ಹಗಲೂರಾತ್ರಿ ಎನ್ನದೇ ಆಭ್ಯಾಸನಿರತರಾದ ಮೀರಾ ಗುರಿ ತಲುಪಬಹುದೆಂಬ ಹೊಂಗನಸು ಮೂಡಿದ್ದು 2011ರ ಸೌತ್ ಏಷ್ಯನ್ ಜೂನಿಯರ್ ಗೇಮ್ಸ್. ಇಲ್ಲಿ ಚಿನ್ನದ ಪದಕ ಗೆಲ್ಲೋ ಮೂಲಕ ಇಡೀ ದೇಶದ ಗಮನ ಸೆಳದಳು ಮೀರಾಭಾಯಿ ಚಾನೂ. ಆಗ ಸಾಧನೆಗೆ ಫಲ ಎಂಬಂತೆ ರೈಲ್ವೇ ಇಲಾಖೆ ಮೀರಾಭಾಯಿ ಚಾನೂಗೆ ನೌಕರಿ ನೀಡಿತು. ಇದರಿಂದ ಹಣಕಾಸು ಸಮಸ್ಯೆ ತಕ್ಕಮಟ್ಟಿಗೆ ಸಾಲ್ವ್ ಆದಂತಾಯಿತು. ಇದರಿಂದ ಮೀರಾಗೆ ಇನ್ನೂ ಹೆಚ್ಚಿನ ತರಬೇತಿ ಪಡೆಯೋಕೆ ಅನುವಾಯಿತು. 2013ರಲ್ಲಿಜೂನಿಯರ್ ನ್ಯಾಷನಲ್ ಚಾಂಪಿಯನ್ ಶಿಪ್ ಗೆದ್ದ ಚಾನೂ, ಆಬಳಿಕ ಹಿಂದಿರುಗಿ ನೋಡಲಿಲ್ಲ. 2014ರಲ್ಲಿ ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಬೆಳ್ಳಿಪದಕ ಗೆದ್ದ ಮೀರಾ, ಆನಂತರ ಗುರಿ ಇಟ್ಟಿದ್ದು 2016ರ ರಿಯೋ ಒಲಿಂಪಿಕ್ಸ್ ನತ್ತ.

ಸೋಲನ್ನೇ ಗೆಲುವಿನ ಮೆಟ್ಟಿಲಾಗಿಸಿದ ಛಲಗಾತಿ!ಆದ್ರೆ, ರಿಯೋ ಒಲಿಂಪಿಕ್ಸ್ ನಲ್ಲಿ ನಿರಾಶಾದಾಯಕ ಪ್ರದರ್ಶನ ನೀಡಿದ ಮೀರಾ, ಆರಂಭಿಕ ಹಂತದಲ್ಲೇ ಸೋತು ನಿರ್ಗಮಿಸಬೇಕಾಯಿತು, ಇದರಿಂದ ಜಂಘಾಬಲವೇ ಉಡುಗಿಹೋದಂತಾಗಿ ಖಿನ್ನತೆಗೆ ಜಾರಿದರು ಮೀರಾ. ಕೊನೆಗೆ ಜೀವನ ಇನ್ನೂ ಮುಗಿದಿಲ್ಲ. ಸಾಧಿಸೋಕೆ ಬಹಳಷ್ಟಿದೆ ಎಂದುಕೊಂಡವರೇ ಮತ್ತೆ ಗುರಿಯತ್ತ ಹೆಜ್ಜೆ ಇಟ್ಟರು. ಇಚ್ಛಾಶಕ್ತಿ, ಸಾಧೀಸೋ ಛಲ ಹಾಗೂ ಸತತ ಪರಿಶ್ರಮದಿಂದಾಗಿ 2017ರ ವಿಶ್ವ ವೇಟ್ ಲಿಫ್ಟಿಂಗ್ ಚಾಂಪಿಯನ್ ಶಿಪ್ ನಲ್ಲಿ ಮೀರಾ ಗೋಲ್ಡ್ ಮೆಡಲ್ ಪಡೆದರು. ಆ ಚಾನೂ ಬಳಿಕ ನಡೆದಿದ್ದೇ ಹಾದಿ. ಇದೀಗ ಈಕೆಯ ಶ್ರಮಕ್ಕೆ ಗೆಲುವು ಸಂದಿದೆ. ಒಲಿಂಪಿಕ್ಸ್ ನಲ್ಲಿ ಈಗ ಇಡೀ ವಿಶ್ವವೇ ತಿರುಗಿನೋಡುವಂತೆ ಮಾಡಿದ್ದಾರೆ ಮೀರಾ ಭಾಯಿ ಚಾನೂ. 5 ವರ್ಷಗಳ ಹಿಂದೆ ನಿರಾಸೆ ಅನುಭವಿಸಿದ್ದರೋ ಅದೇ ಒಲಿಂಪಿಕ್ಸ್ ಮೀರಾಭಾಯಿಗೆ ರಜತ ಸ್ವಾಗತ ಕೊಟ್ಟಿದೆ. ಇಡೀ ದೇಶ ಮೇಲೆದ್ದು ಚಪ್ಪಾಳೆ ಹೊಡೆದಿದೆ. ಇದಕ್ಕಿಂತಾ ಸೌಭಾಗ್ಯ ಇನ್ನೇನು ಬೇಕು?

ಟೋಕಿಯೋ ಒಲಿಂಪಿಕ್ಸ್ ನಲ್ಲಿ ಭಾರತಕ್ಕೆ ಬೆಳ್ಳಿ ಮಂದಹಾಸ ಮೂಡಿಸಿದ ಮೀರಾಭಾಯಿ ಚಾನೂಗೂ ಬೆಂಗಳೂರಿಗೂ ವಿಶೇಷ ಸಂಬಂಧವಿದೆ. ಏಕೇಂದ್ರೆ, ಜೂನಿಯರ್ ಹಂತದಲ್ಲಿ ಮೀರಾಭಾಯಿ ಟ್ರೈನಿಂಗ್ ಪಡೆದಿದ್ದೇ ಬೆಂಗಳೂರಿನ ಸಾಯ್ ಕೇಂದ್ರದಲ್ಲಿ. ಸಿಲಿಕಾನ್ ಸಿಟಿಯ ಸ್ಪೋರ್ಟ್ ಸ್ ಅಥಾರಿಟಿ ಆಫ್ ಇಂಡಿಯಾ ಕೇಂದ್ರದಲ್ಲೇ ಮೀರಾ ವೇಟ್ ಲಿಫ್ಟಿಂಗ್ ತರಬೇತಿ ಪಡೆದಿದ್ದಾರೆ. ಇದೀಗ ಇಲ್ಲಿ ಟ್ರೈನ್ ಆದ ಬಾಲಕಿ, ಒಲಿಂಪಿಕ್ಸ್ ಸಿಲ್ವರ್ ಮೆಡಲ್ ಗಳಿಸುವಷ್ಟು ಹೆಮ್ಮರವಾಗಿ ಬೆಳೆದಿರೋದು, ಇಲ್ಲಿನ ಕ್ರೀಡಾಳುಗಳಿಗೆ ಸ್ಫೂರ್ತಿ ಕೊಟ್ಟಿದೆ.


ಟೋಕಿಯೊದಲ್ಲಿ ನಡೀತಿರೋ ಒಲಿಂಪಿಕ್ಸ್ ನಲ್ಲಿ ಮಣಿಪುರ ವೇಟ್ ಲಿಫ್ಟರ್ ಜಾದೂ ಮಾಡಿದ್ದಾರೆ. ಪುಟ್ಟ ಹಳ್ಳಿಯಲ್ಲಿ ಹುಟ್ಟಿಬೆಳೆದ ಮೀರಾ ಭಾಯಿ ಚಾನೂ, ಇಡೀ ದೇಶವೇ ಹೆಮ್ಮೆಪಡುವಂತಹ ಅಚೀವ್ ಮೆಂಟ್ ಮಾಡಿದ್ದಾರೆ. ಇನ್ನ, ವೇಟ್ ಲಿಫ್ಟಿಂಗ್ ಫೈನಲ್ ಗೆ ಬಂದಿದ್ದ ಚಾನೂ ವೇಟ್ ಲಿಫ್ಟಿಂಗ್ ಲೈವ್ ಅನ್ನು ಕುಟುಂಬಸ್ಥರು, ಸಂಬಂಧಿಕರು, ಸ್ನೇಹಿತರು, ಕುತೂಹಲದಿಂದ ವೀಕ್ಷಿಸೋ ದೃಶ್ಯ ಲಭ್ಯವಾಗಿದೆ. ರೋಚಕವಾಗಿದ್ದ ಕಾಂಪಿಟಿಸನ್ ನಲ್ಲಿ ತಮ್ಮ ಹಳ್ಳಿಯ ಮಗಳು ಗೆಲ್ಲಲಿ ಅಂತಾ ಕೈಮುಗಿದು ದೇವರ ಸ್ಮರಣೆ ಮಾಡಿದ್ದು ಫಲ ಕೊಟ್ಟಂತಿದೆ. ಅಲ್ಲಿ ಬೆಳ್ಳಿಪದಕ ಗೆಲ್ಲುತ್ತದ್ದಂತೆ ಅತ್ತ ಮೀರಾ ಭಾಯಿ ಕುಣಿದುಕುಪ್ಪಳಿಸಿದ್ರೆ, ಇತ್ತ ಊರ ಜನ ಸಂಭ್ರಮಕ್ಕೆ ಮಿತಿಯೇ ಇರಲಿಲ್ಲ.

ಇನ್ನೊಂದೆಡೆ, ಬೆಳ್ಳಿಗೆದ್ದ ಮೀರಾಭಾಯಿ ಚಾನೂಗೂ ಬೆಂಗಳೂರಿಗೂ ಅವಿನಾನುಭಾವ ಸಂಬಂಧವಿದೆ. ಇದೇನು..? ಪೂರ್ವದ ಮಣಿಪುರಕ್ಕೂ ದಕ್ಷಿಣದ ಬೆಂಗಳೂರಿಗೂ ಎಲ್ಲಿಯ ಲಿಂಕ್ ಅಂತೀರಾ? ಅಲ್ಲೇ ಇರೋದು ನೋಡಿ..ಅಷ್ಟಕ್ಕೂ ಚಿಕ್ಕ ವಯಸ್ಸಿನಿಂದಲೂ ನುರಿತ ತರಬೇತಿ ಕೇಂದ್ರಗಳಲ್ಲಿ ತರಬೇತಿ ಪಡೆಯುತ್ತಾ ಬಂದ ಮೀರಾಭಾಯಿ ಚಾನೂ, ಬೆಂಗಳೂರಿನಲ್ಲೂ ಟ್ರೈನಿಂಗ್ ಪಡೆದಿದ್ದಾರೆ. ಜೂನಿಯರ್ ಚಾಂಪಿಯನ್ ಶಿಪ್ ಸ್ಪರ್ದೆ ಮುನ್ನ ಮೀರಾಭಾಯಿ ಚಾನೂ ಬೆಂಗಳೂರಿನ ಭಾರತೀಯ ಕ್ರೀಡಾ ಪ್ರಾಧಿಕಾರ ಸಾಯ್ ನಲ್ಲಿ ಆಯೋಜಿಸಲಾಗಿದ್ದ ಟ್ರೈನಿಂಗ್ ಕ್ಯಾಂಪ್ ಗಳಲ್ಲಿ ಭಾಗವಹಿಸಿದ್ದಾರೆ. ಮೀರಾಗೆ ಬೆಂಗಳೂರಿನ ವೇಯ್ಟ್ ಲಿಫ್ಟಿಂಗ್ ಟ್ರೈನರ್ ಗಳಿಂದ ತರಬೇತಿ ಸಿಕ್ಕಿದೆ.

ಒಟ್ಟಾರೆ, ಮೀರಾಭಾಯಿ ಚಾನೂ ಟೋಕಿಯೋ ಒಲಿಂಪಿಕ್ಸ್ ನ ಮೊದಲ ದಿನವೇ ಕಮಾಲ್ ಮಾಡಿದ್ದಾರೆ. ಮೂಲತಃ ಬಿಲ್ಲುಗಾರಿಕೆಯತ್ತ ಆಸಕ್ತಿಯಿದ್ದರೂ, ಕುಂಜಾರಾಣಿ ನೋಡಿದ ಬಳಿಕ ವೇಟ್ ಲಿಫ್ಟರ್ ಆಗಬೇಕೆಂದು ಗುರಿ ಹೊತ್ತ ಮೀರಾ, ಇದೀಗ ಗುರಿ ಮುಟ್ಟಿದ್ದಾರೆ. ಅತಿ ಬಡತನದ ಮಧ್ಯೆಯೂ ಛಲವೊಂದಿದ್ರೆ ಸಾಕು..ಎಂಥಾ ಗುರಿ ಬೇಕಾದ್ರೂ ಮುಟ್ಟಬಹುದು ಎಂಬ ಮಾತಿಗೆ ಮೀರಾಭಾಯಿ ಚಾನೂ ಸಾಕ್ಷಿ ಯಾಗಿದ್ದಾರೆ.

ಕರೊನಾ ಆತಂಕದ ನಡುವೆಯೇ ಆರಂಭವಾದ ಒಲಿಂಪಿಕ್ಸ್ ಕ್ರೀಡಾಕೂಟದ ಮೊದಲ ದಿನವೇ ಭಾರತ ಸಿಕ್ಸರ್ ಬಾರಿಸಿದೆ. ವೇಟ್ ಲಿಫ್ಟರ್ ಮೀರಾಭಾಯಿ ಚಾನೂ, ತಮ್ಮ ಶಕ್ತಿಮೀರಿ ವೇಟ್ ಲಿಫ್ಟ್ ಮಾಡಿದ ಪರಿಣಾಮ ಭಾರತಕ್ಕೆ ಇತಿಹಾಸದಲ್ಲೇ ಮೊದಲ ಬಾರಿಗೆ ಮಹಿಳಾ ವೇಟ್ ಲಿಫ್ಟಿಂಗ್ ಕೆಟಗಿರಿಯಲ್ಲಿ ಸಿಲ್ವರ್ ಮೆಡಲ್ ಬಂದಿದೆ. ಇದರೊಂದಿಗೆ ಈ ಸಲದ ಮೆಡಲ್ ಟ್ಯಾಲಿ ಟಿಕ್ ಆರಂಭಿಸಿರೋ ಭಾರತ, ಇನ್ನೂ ಹಲವಾರು ಪದಕಗಳನ್ನ ಗೆಲ್ಲೋಕೆ ಮೀರಾ ಖಂಡಿತವಾಗಿಯೂ ಸ್ಫೂರ್ತಿ ಎನ್ನಬಹುದು.