Shivakumara Swamiji History PART-01

Apr 01, 2022 11:21 am By Admin

ದಿವ್ಯ ಚೇತನ ಶ್ರೀ ಸಿದ್ಧಗಂಗಾ ಶ್ರೀಗಳ ಹುಟ್ಟು, ಬಾಲ್ಯ, ಜೀವನ ಸಾಧನೆ

ತುಮಕೂರು: ಸಿದ್ಧಗಂಗಾಮಠದ ಹಿರಿಯ ಶ್ರೀ ಡಾ.ಶಿವಕುಮಾರಸ್ವಾಮಿಗಳು ನಡೆದಾಡುವ ದೇವರು, ತ್ರಿವಿಧ ದಾಸೋಹಿ ಎಂದೇ ಭಕ್ತರ ಮನ, ಮನೆಯಲ್ಲಿ ನೆಲೆಗೊಂಡವರು. ಸಾಮಾನ್ಯ ಬಡ ಕುಟುಂಬವೊಂದರಿಂದ ಬಂದ ಶ್ರೀಗಳು ಅಸಾಮಾನ್ಯರಾಗಿ ಜಗತ್ತಿಗೆ ಬೆಳಕಾಗಿದ್ದು ಈ ಶತಮಾನದ ಭಾಗ್ಯ. ಶಿಕ್ಷಣ, ಆರೋಗ್ಯ, ಧರ್ಮದ ಏಳಿಗೆಗೆ ಶ್ರೀಗಳು ತಮ್ಮ ಇಡೀ ಜೀವನವನ್ನು ಮುಡಿಪಾಗಿರಿಸಿದವರು. ಜಾತಿ, ಬೇಧವಿಲ್ಲದೆ ತಮ್ಮ ಮಠದಲ್ಲಿ ಸರ್ವಧರ್ಮಿಯರಿಗೂ ಆಶ್ರಯ ನೀಡಿದ ಸಿದ್ಧಗಂಗಾ ಮಠದ ಕೀರ್ತಿ ಪತಾಕೆ ಡಾ.ಶಿವಕುಮಾರಸ್ವಾಮಿಗಳ ಕಾರಣದಿಂದಲೇ ಇಂದು ವಿಶ್ವಮಟ್ಟದಲ್ಲಿ ರಾರಾಜಿಸುತ್ತಿದೆ.

ಹುಟ್ಟು

ರಾಮನಗರ ಜಿಲ್ಲೆ, ಮಾಗಡಿ ತಾಲೂಕು, ಸೋಲೂರು ಹೋಬಳಿ ವೀರಾಪುರ ಎಂಬ ಸಣ್ಣ ಗ್ರಾಮ ಶ್ರೀಗಳ ಹುಟ್ಟೂರು. ಹೊನ್ನಪ್ಪ(ಹೊನ್ನೇಗೌಡರು) ಮತ್ತು ಗಂಗಮ್ಮ ದಂಪತಿಯರ 13 ಮಕ್ಕಳಲ್ಲಿ ಶಿವಣ್ಣ(ಈಗಿನ ಡಾ.ಶ್ರೀ ಶಿವಕುಮಾರಸ್ವಾಮೀಜಿ) ಒಬ್ಬರಾಗಿ 1908ರ ಏಪ್ರಿಲ್‌ 1ರಂದು ಜನಿಸಿದರು. ಇವರ ಆಗಮನದಿಂದ ಮನೆಯಲ್ಲಿ ಬೆಳೆ, ದನ, ಕರು, ಮೇವು ಎಲ್ಲದರಲ್ಲೂ ಸಮೃದ್ಧಿ ಉಂಟಾಯಿತು. ಎಂಟು ಗಂಡು ಮತ್ತು ಐದು ಹೆಣ್ಣು ಮಕ್ಕಳಲ್ಲಿ ಉತ್ಸಾಹ ಚಿಲುಮೆಯಂತೆ ಕಾಣುತ್ತಿದ್ದ ಇವರ ಮೇಲೆ ತಂದೆ-ತಾಯಿಗಳಿಗೆ ವಾತ್ಸಲ್ಯ ಅಧಿಕವಾಗಿತ್ತು.

ತಂದೆ-ತಾಯಿ, ಅಣ್ಣಂದಿರ, ಅಕ್ಕಂದಿರ, ಮಮತೆಯ ಸಾಗರದಲ್ಲಿ ಬೆಳೆಯಲಾರಂಭಿಸಿದ ಶ್ರೀ ಶಿವಕುಮಾರ ಸ್ವಾಮಿಗಳು ಸಮಗ್ರ ವೀರಾಪುರಕ್ಕೆ ಪ್ರೀತಿಯ ಬಾಲಕರಾಗಿದ್ದರು. ಶ್ರೀಗಳ ಬಾಲ್ಯದಲ್ಲಿ ಹಸ್ತ ಸಾಮುದ್ರಿಕರೊಬ್ಬರು ಶಿವಣ್ಣರ ಅಂಗೈ ನೋಡಿ, ‘ಮುಂದೆ ಈ ಮಗು ಲಕ್ಷಾಂತರ ಮಕ್ಕಳಿಗೆ ತಂದೆ ಸಮಾನವಾದ ಪೂಜ್ಯ ವ್ಯಕ್ತಿಯಾಗುತ್ತಾನೆ. ಲಕ್ಷಾಂತರ ಮಕ್ಕಳ ಬಾಳಿಗೆ ಬೆಳಕಾಗುತ್ತಾನೆ’ ಎಂದಿದ್ದರಂತೆ.

ಬಾಲ್ಯ

ಸಂಪ್ರದಾಯಸ್ಥ ಶರಣರ ಕುಟುಂಬದ ವಾತಾವರಣದಲ್ಲಿ ಬೆಳೆದ ಶಿವಣ್ಣ ಪ್ರಾಥಮಿಕ ಶಿಕ್ಷಣವನ್ನು ವೀರಾಪುರ ಮತ್ತು ಪಕ್ಕದ ಹಳ್ಳಿಯಾದ ಪಾಲನಹಳ್ಳಿಯಲ್ಲಿನ ಕೂಲಿ ಮಠದಲ್ಲಿ ಪೂರೈಸಿದರು. ತಮ್ಮ 8ನೇ ವಯಸ್ಸಿನಲ್ಲಿ ತಾಯಿಯನ್ನು ಕಳೆದುಕೊಂಡ ಶಿವಣ್ಣ, ಬಳಿಕ ತುಮಕೂರು ತಾಲೂಕಿನ ನಾಗವಲ್ಲಿಯಲ್ಲಿನ ತಮ್ಮ ಅಕ್ಕ ಪುಟ್ಟಹೊನ್ನಮ್ಮನವರ ಮನೆಯಲ್ಲಿ ಬೆಳೆದರು. ಇಲ್ಲಿಯೇ ಎ.ವಿ ಶಾಲೆಯಲ್ಲಿ ಮಾಧ್ಯಮಿಕ ಶಿಕ್ಷಣವನ್ನು ಪೂರೈಸಿಕೊಂಡರು. ಬಳ್ಳಗೆರೆಯ ಬೋರೆಗೌಡ, ವೆಂಕಟರಮಣಯ್ಯ, ಬಾಲಯ್ಯ, ರುದ್ರಯ್ಯ ಇವರುಗಳು ಶಿವಣ್ಣರ ಬಾಲ್ಯ ಸ್ನೇಹಿತರಾಗಿದ್ದರು. ಬಾಲ್ಯದಲ್ಲಿ ಶಿವಣ್ಣನವರಿಗೆ ಅನ್ನದ ಮೇಲೆ ತುಪ್ಪ ಹಾಕಿದ ಮೇಲೆ ಅದನ್ನು ಅನ್ನದಲ್ಲಿ ಕಲೆಸಿ, ಮುಷ್ಟಿಯಲ್ಲಿ ಹಿಂಡಿದರೆ ಬೆರಳು ಸಂದಿಯಿಂದ ತುಪ್ಪ ಹೊರಬರಬೇಕಿತ್ತಂತೆ. ಇಲ್ಲವಾದರೆ ‘ಅಕ್ಕಾ, ನೋಡಿಲ್ಲಿ ನೀನು ಹಾಕಿದ ತುಪ್ಪ ಅನ್ನಕ್ಕೇ ಹತ್ತಲೇ ಇಲ್ಲ. ಇನ್ನಷ್ಟು ಹಾಕಿದರೆ ನಾನು ಉಣ್ಣುವುದು’, ಎಂದು ಅಕ್ಕ ಪುಟ್ಟ ಹೊನ್ನಮ್ಮನವರನ್ನು ಸತಾಯಿಸುತ್ತಿದ್ದಂತೆ. ಇಂತಹ ಅನೇಕ ತುಂಟಾಟದೊಂದಿಗೆ ಬೆಳೆದ ಶಿವಣ್ಣ, ಬರ ಬರುತ್ತಾ ಬಹಳ ಶಿಸ್ತು ಬೆಳೆಸಿಕೊಂಡರು.

ಶಿಕ್ಷಣ

ಶಿವಣ್ಣ ಆಟ, ಪಾಠದಲ್ಲಿ ಸದಾ ಮುಂದಿದ್ದರು. ಎರಡು ವರ್ಷಗಳ ಪಾಠ ಪ್ರವಚನಗಳನ್ನು ಒಂದೇ ವರ್ಷದಲ್ಲಿ ಓದಿ 1919 ಕನ್ನಡ ಲೋಯರ್‌ ಸೆಕೆಂಡರಿ ಪರೀಕ್ಷೆಯಲ್ಲೂ, 1921 ರಲ್ಲಿ ಇಂಗ್ಲಿಷ್‌ ಲೋಯರ್‌ ಸೆಕೆಂಡರಿ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದರು. ಅಣ್ಣ ಲಿಂಗಪ್ಪ, ಇಂಗ್ಲಿಷ್‌ ಲೋಯರ್‌ ಸೆಕೆಂಡರಿ ಪರೀಕ್ಷೆಯಲ್ಲಿ ತೇರ್ಗಡೆಯಾಗಲು ಒಂದು ವರ್ಷ ತಡವಾಯಿತು. ಇದರಿಂದ ಶಿವಣ್ಣನವರ ಒಂದು ವರ್ಷದ ವಿದ್ಯಾಭ್ಯಾಸ ನಿಂತಿತು. ಕಾರಣ ಅಣ್ಣ, ತಮ್ಮ ಇಬ್ಬರನ್ನು ತುಮಕೂರಿನಲ್ಲಿ ಒಟ್ಟಿಗೆ ಓದಲು ಬಿಡಬೇಕು ಎನ್ನುವುದು ಮನೆಯವರ ಆಪೇಕ್ಷೆಯಾಗಿತ್ತು. ನಾಗವಲ್ಲಿಯಲ್ಲಿ ಶಿವಣ್ಣನವರು ವಿದ್ಯಾಭ್ಯಾಸದಲ್ಲಿ ಮಹತ್ತರ ಸಾಧನೆ ಮಾಡುವ ಮೂಲಕ ಗ್ರಾಮಾಂತರ ಪ್ರದೇಶದ ಮೇಧಾವಿ ವಿದ್ಯಾರ್ಥಿಯಾಗಿ ಎಲ್ಲರ ಗಮನ ಸೆಳೆದರು.

ನಾಗವಲ್ಲಿಯಲ್ಲಿ ರೂರಲ್‌ ಎ.ವಿ.ಸ್ಕೂಲ್‌ (ಗ್ರಾಮಾಂತರ ಆಂಗ್ಲೋ ಎರ್ನಾಕ್ಯುಲರ್‌ ಸ್ಕೂಲ್‌) ನಲ್ಲಿ ಯಶಸ್ವಿಯಾಗಿ ವಿದ್ಯಾಭ್ಯಾಸ ಮುಗಿಸಿ ಶಿವಣ್ಣನವರು ಅಣ್ಣ ಲಿಂಗಪ್ಪನವರೊಂದಿಗೆ 1922 ರಲ್ಲಿ ತುಮಕೂರಿಗೆ ಬಂದರು. ಸರಕಾರಿ ಹೈಸ್ಕೂಲಿಗೆ ಮೊದಲ ತರಗತಿಗೆ ಸೇರಿದರು. ತುಮಕೂರಿನಲ್ಲಿ ಒಂದು ಬಾಡಿಗೆ ಕೊಠಡಿ ಹಿಡಿದು ಸ್ವತಃ ಅಡುಗೆ ಮಾಡಿಕೊಂಡು ಊಟಮಾಡುತ್ತ ಹೈಸ್ಕೂಲ್‌ ವಿದ್ಯಾಭ್ಯಾಸ ಮುಂದುವರಿಸಿದರು. ಹೈಸ್ಕೂಲಿನಲ್ಲಿ ಕೆಂಬಳಲಿನಿಂದ ಬಂದ ಕಾಳಪ್ಪನವರ (ಕನಕ ದೇಗುಲ ಮಠದ ಮಹಾಲಿಂಗ ಸ್ವಾಮಿಗಳು) ಪರಿಚಯವಾಯಿತು. ಸ್ನೇಹವಾಗಿ ತಿರುವು ಪಡೆಯಿತು.

ಶ್ರೀಮಠದ ಸಂಪರ್ಕ

ಸಿದ್ಧಗಂಗೆಯ ಕೀರ್ತಿಯನ್ನು, ಉದ್ದಾನ ಶಿವಯೋಗಿಗಳ ಮಹಿಮೆಯನ್ನು ಬಾಲ್ಯದಿಂದಲೇ ಕೇಳುತ್ತಾ ಬಂದಿದ್ದ ಶಿವಣ್ಣನವರು ಬಿಡುವು ಸಿಕ್ಕಾಗಲೆಲ್ಲ ಸಿದ್ಧಗಂಗಾ ಕ್ಷೇತ್ರಕ್ಕೆ ಕಾಳಪ್ಪನವರೊಡನೆ ಭೇಟಿ ನೀಡುತ್ತಿದ್ದರು. ಆಗಲೇ ಇವರು ಉದ್ದಾನ ಶಿವಯೋಗಿಗಳ ಅಪಾರ ಶಿವಯೋಗ ಸಂಪತ್ತಿಗೆ ಮಾರುಹೋದರು. ಶಿವಣ್ಣನವರು ಸಿದ್ಧಗಂಗೆಯ ಬೆಟ್ಟವನ್ನೇರಿ ಸಿದ್ಧಲಿಂಗೇಶ್ವರ ಮೂರ್ತಿಯೆದುರು ಜಲತೀರ್ಥವಿರುವ ಅಮ್ಮನವರ ಗವಿಯಲ್ಲಿ ಕುಳಿತು ಗಂಟೆಗಟ್ಟಲೆ ಮೈಮರೆಯುತ್ತಿದ್ದರು. ಸಿದ್ಧಗಂಗಾ ಬೆಟ್ಟದ ಮೂಲೆ ಮೂಲೆಗಳ ಪರಿಚಯ ಮಾಡಿಕೊಂಡರು. ದಿನಕಳೆದಂತೆ ಸಿದ್ಧಗಂಗೆಯ ಮೇಲಿನ ಮಮತೆ ಅಧಿಕವಾಗತೊಡಗಿತು. ಆದರೆ ಉದ್ದಾನ ಸ್ವಾಮಿಗಳನ್ನು ಕಂಡರೆ ಭಯದಿಂದ ದೂರದಿಂದಲೇ ನಮಸ್ಕಾರ ಹಾಕಿ ಬರುತ್ತಿದ್ದರು.

ಶ್ರೀಗಳಿಗೆ ಮಠದಲ್ಲಿ ಅಂದು ಆಶ್ರಯ ಸಿಕ್ಕಿರಲಿಲ್ಲ

ಶಿವಣ್ಣನವರ ತೇಜೋವಿಶೇಷ, ಗುರುಲಿಂಗ ಜಂಗಮ ಭಕ್ತಿ, ತಲ್ಲೀನತೆಗೆ ಆಕರ್ಷಿತರಾದ ಆ ಮಠದ ಉತ್ತರಾಧಿಕಾರಿಗಳೆಂದು ಗೊತ್ತಾಗಿದ್ದ ಮರುಳಾರಾಧ್ಯರು ಇವರಲ್ಲಿ ಯಾವುದೋ ವಿಶೇಷ ಶಕ್ತಿಯನ್ನು ಕಾಣತೊಡಗಿದರು. ಇವರಲ್ಲಿರುವ ಮಹತ್ತರ ತೇಜಸ್ಸಿಗೆ ಮಾರುಹೋಗಿದ್ದರು. ಈ ನಡುವೆ ಶಿವಣ್ಣ ಕಷ್ಟಪಟ್ಟು ಓದಿ 1929ರಲ್ಲಿ ಮೆಟ್ರಿಕ್ಯುಲೇಶನ್‌ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದರು. ಈ ಹೊತ್ತಿಗೆ ಅಣ್ಣ ಲಿಂಗಪ್ಪನವರು ಶಿಕ್ಷ ಣ ಕುಂಠಿತಗೊಳಿಸಿ ಊರಿಗೆ ಹಿಂದಿರುಗಿದ್ದರು.ಪ್ಲೇಗು ಜಾಢ್ಯದ ನಿಮಿತ್ತ 1924ರಲ್ಲಿ ಶಿವಣ್ಣನವರದ್ದೂ ಒಂದು ವರ್ಷ ವಿದ್ಯಾಭ್ಯಾಸ ಕುಂಠಿತಗೊಂಡಿತ್ತು.

ಪ್ಲೇಗಿನ ಭಯದಿಂದ ಸ್ವತಃ ಕೊಠಡಿಯಲ್ಲಿ ಅಡುಗೆ ಮಾಡಿಕೊಂಡು ಊಟ ಮಾಡುವುದು ಅನಾನುಕೂಲವಾಗಿತ್ತು. ಆದ್ದರಿಂದ ಉದ್ದಾನ ಶಿವಯೋಗಿಗಳನ್ನು ಕಂಡು ಮಠದಲ್ಲಿ ಊಟ, ವಸತಿ ಸೌಕರ್ಯಕ್ಕಾಗಿ ಪ್ರಾರ್ಥಿಸಿಕೊಳ್ಳಬೇಕು ಎಂದು ಸಿದ್ಧಗಂಗೆಗೆ ಬಂದರು. ಶಿವಯೋಗಿಗಳನ್ನು ಕಾಣುವುದು ಹೇಗೆ? ಎಂದು ಬಹಳ ಹೊತ್ತು ಯೋಚಿಸಿದರು. ಏಕೆಂದರೆ ಶಿವಣ್ಣನವರಿಗೆ ಯಾರನ್ನಾದರೂ ಕೇಳಬೇಕೆಂದರೆ ಆಗುತ್ತಿರಲಿಲ್ಲ. ಅತ್ಯಂತ ಸಂಕೋಚ ಸ್ವಭಾವದವರಾಗಿದ್ದರು. ಆದರೂ ಧೈರ್ಯಮಾಡಿ ಉದ್ದಾನ ಶಿವಯೋಗಿಗಳನ್ನು ಕಂಡು, ಮಠದಲ್ಲಿ ಆಶ್ರಯ ಪಡೆದು ಶಿಕ್ಷ ಣ ಮುಂದುವರಿಸಲು ಅವಕಾಶ ಕೋರಿದರು. ಆದರೆ ಉದ್ದಾನ ಶಿವಯೋಗಿಗಳು ಅವಕಾಶ ನೀಡಲಿಲ್ಲ. ಶಿವಣ್ಣನವರ ಆಸೆಗೆ ತಣ್ಣೀರೆರೆಚಿದಂತಾಯಿತು. ಆದರೂ ಭಕ್ತಿ ಕಡಿಮೆಯಾಗಲಿಲ್ಲ. ಮರುಳಾರಾಧ್ಯರಾಗಲಿ, ಮಿತ್ರ ಕಾಳಪ್ಪನವರಿಂದಲೂ ಮಠದಲ್ಲಿ ಶಿವಣ್ಣರಿಗೆ ಸ್ಥಾನಕೊಡಿಸಲು ಸಾಧ್ಯವಾಗಲಿಲ್ಲ.

ಬಾಡಿಗೆ ಕೊಠಡಿಯಲ್ಲಿದ್ದರು!

ಅಂತಿಮವಾಗಿ ನಗರದ ಶೆಟ್ಟಿಹಳ್ಳಿಯಲ್ಲಿ ಒಂದು ಬಾಡಿಗೆ ಕೊಠಡಿ ಹಿಡಿದು ತಾವೇ ಅಡುಗೆ ಮಾಡಿಕೊಂಡು ಶಿವಣ್ಣ, ಶಿಕ್ಷಣ ಮುಂದುವರಿಸಿದರು. ಶಿವಣ್ಣರು ಕಷ್ಟಪಟ್ಟು ಓದುತ್ತಿರುವ ವಿಷಯ ತಿಳಿದ ಉದ್ದಾನ ಶಿವಯೋಗಿಗಳು ಶಿವಣ್ಣರ ಪರಿಸ್ಥಿತಿಗೆ ಮರುಗಿದರು. ಬಳಿಕ ಮನಸ್ಸು ಬದಲಾಯಿಸಿ, ಶಿವಣ್ಣರನ್ನು ಕರೆಸಿ ಮಠದಲ್ಲಿ ನಾಲ್ಕು ತಿಂಗಳ ಅವಧಿಗೆ ಆಶ್ರಯ ನೀಡಿದರು. ಮಠದ ವಿದ್ಯಾರ್ಥಿ ನಿಲಯದಲ್ಲಿ ಆಶ್ರಯ ಪಡೆದ ಶಿವಣ್ಣ, 1927ರ ಮಾರ್ಚ್‌-ಏಪ್ರಿಲ್‌ನಲ್ಲಿ ಮೆಟ್ರಿಕ್ಯುಲೇಶನ್‌ ನಂತರದ ಎಂಟ್ರನ್ಸ್‌ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದರು. ಈ ನಾಲ್ಕು ತಿಂಗಳ ಅವಧಿಯಲ್ಲಿ ಶ್ರೀ ಕ್ಷೇತ್ರದ ವಿದ್ಯಾರ್ಥಿಯಾಗಿದ್ದ ಶಿವಣ್ಣ ಮತ್ತು ಮಠದ ಉತ್ತರಾಧಿಕಾರಿ ಎಂದು ನೇಮಕಗೊಂಡಿದ್ದ ಮರುಳಾರಾಧ್ಯರ ನಡುವಿನ ಸ್ನೇಹ ಗಾಢವಾಯಿತು.

ಶಿಕ್ಷಣಕ್ಕಾಗಿ ಬೆಂಗಳೂರಿಗೆ

ಶಿವಣ್ಣನವರ ವಿದ್ಯಾಭ್ಯಾಸದ ಮೂರನೇ ಹಂತ ಇದು. ಎಂಟ್ರೆನ್ಸ್‌ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ ಶಿವಣ್ಣ, ಬೆಂಗಳೂರಿನ ಸೆಂಟ್ರಲ್‌ ಕಾಲೇಜಿಗೆ ಸೇರಿಕೊಳ್ಳಲು ಉದ್ದಾನ ಶ್ರೀಗಳ ಅಪ್ಪಣೆ ಕೇಳಿದರು. ಸ್ವಾಮಿಗಳು, ಚೆನ್ನಾಗಿ ಓದುವಂತೆ ಹಾಗೂ ಆಗಾಗ ಮಠಕ್ಕೆ ಬಂದು ಹೋಗುತ್ತಿರುವಂತೆ ತಿಳಿಸಿ ಆಶೀರ್ವದಿಸಿ ಬೀಳ್ಕೊಟ್ಟರು. ಬೆಂಗಳೂರಿನ ತೋಟದಪ್ಪನವರ ವಿದ್ಯಾರ್ಥಿನಿಲಯಕ್ಕೆ ಸೇರಿಕೊಂಡು ಸೆಂಟ್ರಲ್‌ ಕಾಲೇಜಿನಲ್ಲಿ 1927ರಿಂದ ವಿದ್ಯಾಭ್ಯಾಸ ಮುಂದುವರಿಸಿದರು.

ರಜಾ ದಿನಗಳಲ್ಲಿ ಸಿದ್ಧಗಂಗೆಗೆ

ಶಿವಣ್ಣನವರು ಬೆಂಗಳೂರಿನಲ್ಲಿ ವಿದ್ಯಾರ್ಥಿ ಜೀವನ ಕಳೆಯುತ್ತಿದ್ದರೂ ರಜಾ ದಿನಗಳನ್ನು ಸಿದ್ಧಗಂಗಾ ಕ್ಷೇತ್ರದಲ್ಲಿ ಕಳೆಯುವುದೇ ಅಧಿಕವಾಯಿತು. ಹುಟ್ಟೂರಾದ ವೀರಾಪುರಕ್ಕೆ ಆಗಾಗ ಹೋಗಿ ನಾಲ್ಕಾರು ದಿನಗಳಿದ್ದು ಪುನಃ ಸಿದ್ಧಗಂಗೆಗೆ ಬರುತ್ತಿದ್ದರು. ಸದಾ ಮರುಳಾರಾಧ್ಯರ ಸ್ನೇಹದಲ್ಲಿಯೇ ಇರುತ್ತಿದ್ದ ಇವರು ಆಗಾಗ ಉದ್ದಾನ ಶಿವಯೋಗಿಗಳ ದೃಷ್ಟಿಗೆ ಬಿದ್ದು ಪರೀಕ್ಷೆಗೊಳಗಾಗುತ್ತಿದ್ದರು.

ಮರುಳಾರಾಧ್ಯರಿಲ್ಲದ ಸಮಯವೆಂದರೆ ವಿದ್ಯಾರ್ಥಿಗಳಿಗೆ ಆಲಸ್ಯದ ದಿನ. ಇದನ್ನರಿತ ಶಿವಣ್ಣನವರು ಮರುಳಾರಾದ್ಯರ ಕಪಿನಿಯನ್ನು ತೊಟ್ಟು ಪಾವುಡವನ್ನು ತಲೆಗೆ ಸುತ್ತಿ, ಆವುಗೆಗಳನ್ನು ಮೆಟ್ಟಿ ಸಪ್ಪಳ ಮಾಡುತ್ತ ಅವರಂತೆ ಗುಡುಡುತ್ತ, ವಿದ್ಯಾರ್ಥಿಗಳ ಕೊಠಡಿ ಪ್ರವೇಶ ಮಾಡುತ್ತಿದ್ದಂತೆ. ಮರುಳಾರಾದ್ಯರು ಇಲ್ಲವೆಂದು ಮೈ ಮರೆತು ಮಲಗಿದ್ದ ವಿದ್ಯಾರ್ಥಿಗಳ ಜಂಘಾ ಬಲವೇ ಉಡುಗಿ ಗಡಗಡ ನಡುಗಿ ಮೇಲೆದ್ದು ಅಡ್ಡ ಬಿದ್ದು ಮುಖ ನೋಡಿ ಆಮೇಲೆ ಬಿದ್ದು ಬಿದ್ದು ನಗುತ್ತಿದ್ದರಂತೆ. ಹೀಗೆ ರಜಾ ಕಾಲವನ್ನು ಪೂರೈಸಿ ಯಥಾಪ್ರಕಾರ ಶಿವಣ್ಣನವರು ಬೆಂಗಳೂರಿಗೆ ಬಂದು ಪುನಃ ತಮ್ಮ ವಿದ್ಯಾಭ್ಯಾಸ ಜೀವನದಲ್ಲಿ ತಲ್ಲೀನರಾಗಿರುತ್ತಿದ್ದರು. ಸೆಂಟ್ರಲ್‌ ಕಾಲೇಜಿನಲ್ಲಿ ಭೌತಶಾಸ್ತ್ರ ಮತ್ತು ಗಣಿತಗಳನ್ನು ಐಚ್ಛಿಕ ವಿಷಯಗಳನ್ನಾಗಿ ಸ್ವೀಕರಿಸಿ, ಎರಡುವರ್ಷ ಮುಗಿಸಿ ಮೂರನೆ ವರ್ಷದಲ್ಲಿ ಮುಕ್ಕಾಲು ಭಾಗ ಕಳೆದಿತ್ತು.

ಮರುಳಾರಾಧ್ಯರು ಲಿಂಗೈಕ್ಯ

ಶಿವಣ್ಣ ಅಂತಿಮ ಪರೀಕ್ಷೆಗೆ ಕಾದುಕುಳಿತಿದ್ದರು. 1930 ಜನವರಿ 16 ರಂದು ಬರಸಿಡಿಲಿನಂತೆ ದಾರುಣ ವಾರ್ತೆಯೊಂದು ಬಂದು ಬಡಿಯಿತು. ಶ್ರೀ ಸಿದ್ಧಗಂಗಾ ಕ್ಷೇತ್ರದ ಉತ್ತರಾಧಿಕಾರಿ ಶ್ರೀ ಮರುಳಾರಾಧ್ಯರು ಲಿಂಗೈಕ್ಯರಾಗಿದ್ದರು. ಶಿವಣ್ಣ ತತ್‌ಕ್ಷಣ ಶ್ರೀ ಕೇತ್ರಕ್ಕೆ ಧಾವಿಸಿ ಬಂದರು. ದೈವ ಕರೆದುಕೊಂಡು ಬಂದಿತು ಎಂದರೆ ತಪ್ಪಾಗಲಾರದು.

ಶಿವಣ್ಣ ಶಿವಕುಮಾರಸ್ವಾಮಿಗಳಾಗಿದ್ದು ಹೀಗೆ

1930 ಜನವರಿ 16 ರಂದು ಲಿಂಗೈಕ್ಯರಾದ ಮುರುಳಾರಾಧ್ಯರ ಸಮಾಧಿ ಪೂಜಾ ಕಾರ್ಯ ಮುಗಿಯುತ್ತಿದ್ದಂತೆ ಮುಂದೆ ಮಠದ ಉತ್ತರಾಧಿಕಾರಿ ಯಾರೆಂಬ ಜಿಜ್ಞಾಸೆಯೊಡಮೂಡಿತ್ತು. ಎಲ್ಲರ ಮನಸ್ಸಿನಲ್ಲೂ ಶಿವಣ್ಣನವರೇ ಈ ಕ್ಷೇತ್ರದ ಉತ್ತರಾಧಿಕಾರಕ್ಕೆ ಯೋಗ್ಯ ಎಂಬ ಪಿಸುಗುಟ್ಟುವ ಧ್ವನಿ ಏಳತೊಡಗಿತ್ತು. ಆಗ ಅಲ್ಲಿಗೆ ಬಂದ ಉದ್ಧಾನ ಶ್ರೀಗಳು, ‘ಶಿವಣ್ಣನವರೇ ನೀವು ಈ ಮಠದ ಉತ್ತರಾಧಿಕಾರವನ್ನು ವಹಿಸಿಕೊಂಡು ಸಿದ್ಧಲಿಂಗೇಶ್ವರರ ಪ್ರತಿನಿಧಿಗಳಾಗಿ ಈ ದಾಸೋಹ ಕ್ಷೇತ್ರದ ಗುರುತರ ಹೊಣೆಗಾರಿಕೆಯನ್ನು ವಿಶೇಷ ಶಕ್ತಿ ಸಾಮರ್ಥ್ಯ‌ದಿಂದ ನಡೆಸಿಕೊಂಡು ಹೋಗಬೇಕು. ಇದು ಭಕ್ತರ ಅಭಿಲಾಷೆ ಮತ್ತು ಸಿದ್ಧಲಿಂಗೇಶ್ವರರ ಆಜ್ಞೆ, ನಮ್ಮ ಇಚ್ಛೆ. ಯಾವುದನ್ನೂ ಯೋಚಿಸದೇ ನಮಸ್ಕಾರ ಹಾಕಿಬಿಡು’’ ಎಂದು ಶಿವಣ್ಣನವರ ತಲೆ ಮೇಲೆ ಕೈ ಇಟ್ಟು ಹೇಳಿ ಬಿಟ್ಟರು. ಶಿವಣ್ಣನವರು ಒಪ್ಪಿಗೆ ಸೂಚಿಸಿದರು. ಅವರಿತ್ತ ವೀರಶೈವ ವಿರಕ್ತ ಪರಂಪರೆಯ ಕಾಶಾಯ ವಸ್ತ್ರ ಧರಿಸಿ ‘‘ಶ್ರೀ ಶಿವಕುಮಾರ ಸ್ವಾಮಿಗಳು’’ ಎಂಬ ನೂತನ ನಾಮಾಂತರದಿಂದ ತಮ್ಮ ಪದವಿ ಶಿಕ್ಷ ಣದ ಕೊನೆಯ ಪರೀಕ್ಷೆಗಾಗಿ ಬೆಂಗಳೂರಿಗೆ ತೆರಳಿದರು. ಬಳಿಕ 1930 ಮಾರ್ಚ್‌ 3ರಂದು ಶ್ರೀ ಸಿದ್ಧಗಂಗಾ ಕ್ಷೇತ್ರದ ಉತ್ತರಾಧಿಕಾರಿಯಾಗಿ ಶಿವಣ್ಣ(ಶಿವಕುಮಾರಸ್ವಾಮಿ) ಆಯ್ಕೆಯಾದರು. 1941 ಜನವರಿ 11ರಂದು ಶಿವಯೋಗಿ ಶ್ರೀ ಉದ್ದಾನಸ್ವಾಮಿಗಳು ಲಿಂಗೈಕ್ಯರಾದರು. ಆ ಬಳಿಕ ಶ್ರೀ ಸಿದ್ಧಗಂಗಾ ಮಠದ ಪೂರ್ಣಾಧಿಕಾರಿಯಾಗಿ ಶಿವಕುಮಾರ ಸ್ವಾಮಿಗಳು ಅಧಿಕಾರ ಸ್ವೀಕಾರ ಮಾಡಿದರು. ಶಿವಕುಮಾರ ಸ್ವಾಮಿಗಳು 1988 ಮಾರ್ಚ್‌ 3ರಂದು ಶ್ರೀ ಸಿದ್ದಲಿಂಗ ಸ್ವಾಮಿ ಅವರಿಗೆ ದೀಕ್ಷೆ ನೀಡಿ ತಮ್ಮ ಉತ್ತರಾಧಿಕಾರಿಯನ್ನಾಗಿ ಆಯ್ಕೆ ಮಾಡಿಕೊಂಡರು.

ಮುಖ್ಯಾಂಶಗಳು

* 1930 ಜನವರಿ 16: ಶ್ರೀ ಸಿದ್ಧಗಂಗಾ ಕ್ಷೇತ್ರದ ಉತ್ತರಾಧಿಕಾರಿ ಶ್ರೀ ಮರುಳಾರಾಧ್ಯರು ಲಿಂಗೈಕ್ಯ.

* 1930 ಜನವರಿ 16: ಶ್ರೀ ಸಿದ್ಧಗಂಗಾ ಕ್ಷೇತ್ರದ ಹಿರಿಯ ಶ್ರೀ ಉದ್ಧಾನ ಶಿವಯೋಗಿಗಳಿಂದ ಶಿವಣ್ಣರನ್ನು ಮಠದ ಉತ್ತರಾಧಿಕಾರಿಯನ್ನಾಗಿ ನೇಮಕ, ಶ್ರೀ ಶಿವಕುಮಾರ ಸ್ವಾಮಿಗಳೆಂದು ಶಿವಣ್ಣರಿಗೆ ಮರುನಾಮಕರಣ.

*1930 ಮಾರ್ಚ್‌ 3: ಶ್ರೀ ಸಿದ್ಧಗಂಗಾ ಕ್ಷೇತ್ರದ ಉತ್ತರಾಧಿಕಾರಿಯಾಗಿ ಶಿವಣ್ಣ(ಶಿವಕುಮಾರಸ್ವಾಮಿ) ಆಯ್ಕೆ.

*1941 ಜನವರಿ 11: ಶಿವಯೋಗಿ ಶ್ರೀ ಉದ್ದಾನಸ್ವಾಮಿಗಳು ಲಿಂಗೈಕ್ಯ, ಶ್ರೀ ಸಿದ್ಧಗಂಗಾ ಮಠದ ಪೂರ್ಣಾಧಿಕಾರಿಯಾಗಿ ಶಿವಕುಮಾರ ಸ್ವಾಮಿಗಳಿಂದ ಅಧಿಕಾರ ಸ್ವೀಕಾರ.