Shivakumara Swamiji History PART-02

Apr 01, 2022 11:38 am By Admin

ಶ್ರೀ ಸಿದ್ಧಗಂಗಾ ಕ್ಷೇತ್ರ ಎಂದರೆ ನೆನಪಾಗುವುದು ದಾಸೋಹ.

ಶ್ರೀ ಶಿವಕುಮಾರ ಸ್ವಾಮೀಜಿ ಅವರ ಕಾಲದ ಆರಂಭದಿಂದ ದಾಸೋಹ ವೆಚ್ಚ ದಿನದಿಂದ ದಿನಕ್ಕೆ ಏರಿದವಾದರೂ ಇಲ್ಲಿ ಅನುಚಾನವಾಗಿ ದಾಸೋಹ ನಡೆದುಕೊಂಡು ಬರಬೇಕು ಎಂಬ ಸಂಕಲ್ಪ ಮಾಡಿದರು. ಅರ್ಥಪೂರ್ಣವಾಗಿ ದಾಸೋಹ ನಡೆಸಲು ಯಾವ ಬೆಲೆಯನ್ನಾದರೂ ತೆರಲು, ಎಷ್ಟಾದರೂ ದುಡಿಯಲು ಸಿದ್ಧರಾಗಿದ್ದರು.

ಶ್ರೀ ಸಿದ್ಧಗಂಗಾ ಕ್ಷೇತ್ರ ಎಂದರೆ ದಾಸೋಹ ಎನ್ನುವ ಭಾವನೆ ಮೂಡುತ್ತದೆ. ಇದರಿಂದ ಕ್ಷೇತ್ರದ ಕೀರ್ತಿ ದಿಗಂತಕ್ಕೆ ಮುಟ್ಟಿದೆ. ದಾಸೋಹಕ್ಕೆ ಅಪಾರ ಕೀರ್ತಿ ಬಂದಿದ್ದು ಶಿವಕುಮಾರ ಸ್ವಾಮೀಜಿ ಅವರ ಕಾಲಾವಧಿಯಲ್ಲಿ.

ಈ ಕ್ಷೇತ್ರದಲ್ಲಿ ದಾಸೋಹ ವ್ಯವಸ್ಥೆ ಆರಂಭಗೊಂಡ ಕಾಲ ಸಮರ್ಪಕವಾಗಿ ಸಿಗದಿದ್ದರೂ 19ನೇ ಶತಮಾನದ ಉತ್ತರಾರ್ಧದಲ್ಲಿ ಶ್ರೀ ಕ್ಷೇತ್ರಕ್ಕೆ ಗುಬ್ಬಿಯಿಂದ ಆಗಮಿಸಿದ ಅಟವಿ ಸ್ವಾಮಿಗಳು ದಾಸೋಹ ವ್ಯವಸ್ಥೆಯನ್ನು ಉತ್ತಮಪಡಿಸಿದರು ಎಂದು ತಿಳಿದು ಬರುತ್ತದೆ. ಇವರಿಗಿಂತಲೂ ಮೊದಲು ದಾಸೋಹ ಇತ್ತು ಎಂಬುದಕ್ಕೆ ಸಾಕಷ್ಟು ಸಾಕ್ಷ್ಯಗಳು ಸಹ ಸಿಗುತ್ತವೆ. ಈ ಮಠದ ಧರ್ಮ ಕಾರ‍್ಯಕ್ಕೆ ಸಿದ್ಧಗಂಗಾ ಪಾಳ್ಯ, ಬೊಮ್ಮೇನಹಳ್ಳಿ ಎಂಬೆರಡು ಗ್ರಾಮಗಳು ಇನಾಮಾಗಿ ಕೊಡಲ್ಪಟ್ಟಿದ್ದವು. ಇಲ್ಲಿನ ಧರ್ಮ ಕಾರ್ಯಗಳು ಸರಿಯಾಗಿ ನಡೆಯುತ್ತಿಲ್ಲ ಎಂದು 1860ರಲ್ಲಿ ಆ ಹಳ್ಳಿಗಳನ್ನು ವಾಪಸು ಪಡೆದುಕೊಂಡ ಬಗ್ಗೆ ದಾಖಲೆಗಳಿವೆ.

ಅಟವಿ ಸ್ವಾಮಿಗಳ ಆಗಮನದ ಬಳಿಕ ಪುನಾ ಧರ್ಮ ಕಾರ್ಯಗಳು ವ್ಯವಸ್ಥೆಗೊಂಡ ಬಗ್ಗೆ ತಿಳಿದು ಬರುತ್ತದೆ. ಅಟವೀ ಸ್ವಾಮಿಗಳು ಶ್ರೀ ಸಿದ್ಧಲಿಂಗೇಶ್ವರದ ದೇವರಲ್ಲಿ, ಹತ್ತಿಸಿದ ಒಲೆ ಆರದಂತೆ ಅನುಗ್ರಹಿಸಬೇಕು ಎಂದು ಬೇಡಿಕೊಂಡರು ಎಂಬ ಅಭಿಪ್ರಾಯವಿದೆ. ಅಟವಿಸ್ವಾಮಿಗಳು 1901ರಲ್ಲಿ ದೈವಾಧೀನರಾದ ಬಳಿಕ ಉದ್ದಾನ ಶಿವಯೋಗಿಗಳು ಮಠದಲ್ಲಿ ದಾಸೋಹವನ್ನು ಉತ್ತಮ ಸ್ಥಿತಿಗೆ ತಂದರು ಎಂದು ಹೇಳಲಾಗುತ್ತದೆ.

ನಂತರ ಶ್ರೀ ಶಿವಕುಮಾರ ಸ್ವಾಮೀಜಿ ಅವರ ಕಾಲದ ಆರಂಭದಿಂದ ದಾಸೋಹ ವೆಚ್ಚ ದಿನದಿಂದ ದಿನಕ್ಕೆ ಏರಿದವಾದರೂ ಇಲ್ಲಿ ಅನುಚಾನವಾಗಿ ದಾಸೋಹ ನಡೆದುಕೊಂಡು ಬರಬೇಕು ಎಂಬ ಸಂಕಲ್ಪ ಮಾಡಿದರು. ಅರ್ಥಪೂರ್ಣವಾಗಿ ದಾಸೋಹ ನಡೆಸಲು ಯಾವ ಬೆಲೆಯನ್ನಾದರೂ ತೆರಲು, ಎಷ್ಟಾದರೂ ದುಡಿಯಲು ಸಿದ್ಧರಾಗಿದ್ದರು.

ತಾವೇ ಅಡುಗೆ ಮನೆಯಲ್ಲಿ ನಿಲ್ಲಲೂ, ಸೌದೆ, ಸೊಪ್ಪು ಹೊಂದಿಸಲು ಸಿದ್ಧರಾದರು. ಶ್ರೀಗಳಿಗೆ ಅಷ್ಟೊಂದು ಶ್ರದ್ಧೆ ಈ ದಾಸೋಹದಲ್ಲಿತ್ತು. ಅವರ ಕ್ರಿಯಾ ಸಿದ್ಧಿ ಕಾರಣದಿಂದ ಅನುಚಾನವಾಗಿ ನಡೆದುಕೊಂಡು ಬಂದಿದೆ. ಶಿವಕುಮಾರ ಸ್ವಾಮೀಜಿ ಅವರು ಪ್ರತಿ ವರ್ಷ ಭಕ್ತರ ಮನೆಗೆ ತೆರಳಿ ರೈತರು ಬೆಳೆದ ದವಸ, ಧಾನ್ಯಗಳನ್ನು ಬೇಡಿ ತರುತ್ತಿದ್ದರು. ದಾಸೋಹಕ್ಕೆ ಭಕ್ತರೇ ಎಲೆ, ತರಕಾರಿ, ಹುಣಸೆಹಣ್ಣು, ರಾಗಿ, ಅಕ್ಕಿ, ಬೇಳೆ, ಬೆಲ್ಲ ಮತ್ತಿತರ ವಸ್ತುಗಳ ರೂಪದಲ್ಲಿ ಅರ್ಪಿಸುವ ಪದ್ಧತಿ ಇಂದಿಗೂ ಬೆಳೆದು ಬಂದಿದೆ. ಭಕ್ತರು ತಮ್ಮ ಪಾಲಿನ ದಾಸೋಹ ಪಡಿತರಗಳನ್ನುಸಮರ್ಪಣೆ ಮಾಡಿ ಪ್ರಸಾದ ಸ್ವೀಕರಿಸಿ ಕ್ಷೇತ್ರದರ್ಶನ ಲಾಭ ಪಡೆದುಕೊಂಡು ಹೋಗುತ್ತಿದ್ದಾರೆ.

ತುಮಕೂರು, ಬೆಂಗಳೂರು, ಕೋಲಾರ, ಹಾಸನ, ಸಕಲೇಶಪುರ, ಉತ್ತರ ಕರ್ನಾಟಕ ಕೆಲ ಭಾಗಗಳಿಂದ ಶ್ರೀ ಕ್ಷೇತ್ರಕ್ಕೆ ಪಡಿತರಗಳನ್ನು ಶಕ್ತ್ಯಾನುಸಾರ ಇಂದಿಗೂ ಸಲ್ಲಿಸುತ್ತಾರೆ. ಇಂದು ಸುಮಾರು 10 ಸಾವಿರ ಮಕ್ಕಳು ದಿನದ ಮೂರು ಹೊತ್ತು, ಸಾವಿರಾರು ಭಕ್ತರು ಊಟ, ಉಪಹಾರ ಮಾಡುತ್ತಾರೆ. ಗೋಸಲಸಿದ್ಧೇಶ್ವರರು ಮೊದಲ್ಗೊಂಡು ತೋಂಟದ ಸಿದ್ಧಲಿಂಗೇಶ್ವರರವರೆಗೆ ಶೂನ್ಯಪೀಠಾಧಿಪತಿಗಳು ತಪಸ್ಸು ಮಾಡಿದ ದಿವ್ಯ ಶಿವಯೋಗ ಭೂಮಿಯಲ್ಲಿ ಅನುಚಾನವಾಗಿ ನಡೆದುಕೊಂಡು ಬಂದ ದಾಸೋಹದ ಫಲವೇನೋ ಎಂಬಂತೆ ‘ಸಿದ್ಧಗಂಗೆ ಊಟ ಚಂದ: ಶಿವಗಂಗೆ ನೋಟ ಚಂದ’, ಸಿದ್ಧಗಂಗೆ ಊಟಕ್ಕೆ: ಶಿವಗಂಗೆ ನೋಟಕ್ಕೆ ಎಂಬಿತ್ಯಾದಿ ಗಾದೆಗಳು ಇಂದಿಗೂ ಜನಜನಿತವಾಗಿವೆ. ಇದು ಈ ದಾಸೋಹ ಕ್ಷೇತ್ರದ ವೈಶಿಷ್ಟ್ಯ.

ಜ್ಞಾನ ದಾಸೋಹ

19ನೇ ಶತಮಾನದ ಉತ್ತರಾರ್ಧದಲ್ಲಿ ಉತ್ತರ ಕರ್ನಾಟಕದಿಂದ ಸಿದ್ಧಗಂಗೆಗೆ ಬಂದು ನಿಂತ ಮಹಿಮಾಮೂರ್ತಿ ಶ್ರೀ ಅಟವೀಶ್ವರರಿಂದ ಅಂಕುರಾರ್ಪಣೆಗೊಂಡ ಶೈಕ್ಷಣಿಕ ಕೆಲಸ ಶ್ರೀ ಉದ್ಧಾನೇಶ್ವರರಿಂದ ಮೂರ್ತ ಸ್ವರೂಪ ಪಡೆದವು. ಶಿವಕುಮಾರ ಸ್ವಾಮೀಜಿಯವರ ಮಹಿಮೆಯಿಂದ ಶಿಕ್ಷ ಣ ಕ್ಷೇತ್ರದಲ್ಲಿ ನವ ಯುಗವೇ ಸೃಸ್ಟಿಯಾಯಿತು.
ಭೂತ, ಭವಿಷ್ಯತ್ತಿನ ಪರಿಸ್ಥಿತಿಗಳ ಅರಿವಿದ್ದ ಶಿವಕುಮಾರ ಸ್ವಾಮೀಜಿ, ಬಡತನದ ಬೇಗೆಯಲ್ಲಿ ಬಳಲುತ್ತಿದ್ದ ಕುಟುಂಬದ ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ಅನುಕೂಲ ಕಲ್ಪಿಸಿದರು. ಬಡ ಸಮಾಜದ ಕಣ್ತೆರೆಸಿದರು. ನಿರಕ್ಷ ರ ಕುಕ್ಷಿಗಳ ಎದೆಯಲ್ಲಿ ಎರಡಕ್ಷ ರ ಮೂಡಿಸಬೇಕೆಂಬ ಅವರ ದಿವ್ಯ ಸಂಕಲ್ಪ ಇಂದು ಬೃಹತ್‌ ಶೈಕ್ಷಣಿಕ, ಜ್ಞಾನ ದಾಸೋಹದ ಕ್ಷೇತ್ರವಾಗಿ ಮಾರ್ಪಟ್ಟಿದೆ.

ಒಂದು ವಿಶ್ವವಿದ್ಯಾಲಯಕ್ಕಿಂತ ಕಡಿಮೆ ಇಲ್ಲದಂತೆ ಬೃಹತ್ತಾಗಿ ಬೆಳೆದು ನಿಂತಿರುವುದು ಈ ನಾಡಿನ ಭಾಗ್ಯ.
ಎಲ್ಲ ಶಿಕ್ಷ ಣ ಸಂಸ್ಥೆಗಳಿಗೆ ಮೊದಲು ಆರಂಭವಾದುದು ಶ್ರೀ ಸಿದ್ಧಲಿಂಗೇಶ್ವರ ಸಂಸ್ಕೃತ ಮತ್ತು ವೇದ ಮಹಾಪಾಠಶಾಲೆ. ಸಂಸ್ಕೃತ ಪ್ರಥಮದಿಂದ ಆರಂಭಿಸಿ ವಿದ್ವತ್‌ನ ವಿಭಾಗಗಳಾದ ತರ್ಕ, ವ್ಯಾಕರಣ, ಅಲಂಕಾರ, ಶಕ್ತಿ ವಿಶಿಷ್ಟಾದ್ವೈತ ವೇದಾಂತ ವಿಭಾಗಗಳಲ್ಲಿ ಪಾಠ ಪ್ರವಚನಗಳು ಇಂದಿಗೂ ಅನುಚಾನವಾಗಿ ನಡೆದುಕೊಂಡು ಬಂದಿದೆ.

ಶಿವಕುಮಾರ ಸ್ವಾಮೀಜಿ 1944ರಲ್ಲಿ ಪ್ರೌಢಶಾಲೆಯೊಂದನ್ನು ಸ್ಥಾಪಿಸಿದರು. ಸರಕಾರಿ 1971-72ನೇ ಸಾಲಿನಲ್ಲಿ ಪ್ರಾಥಮಿಕ ಶಾಲೆ ಆರಂಭವಾಯಿತು.

ಇಂಜಿನಿಯರಿಂಗ್‌, ಮ್ಯಾನೇಜ್‌ಮೆಂಟ್‌, ಪಾಲಿಟೆಕ್ನಿಕ್‌, ಫಾರ್ಮಸಿ, ನರ್ಸಿಂಗ್‌, ತಾಂತ್ರಿಕ ವೃತ್ತಿ ಶಿಕ್ಷ ಣ ತರಬೇತಿ ಸಂಸ್ಥೆ, ಬಿ.ಇಡಿ, ಡಿ.ಇಡಿ, ಪ್ರಥಮ ದರ್ಜೆ ಕಾಲೇಜು, ಪದವಿಪೂರ್ವ ಕಾಲೇಜು, ಸಂಯುಕ್ತ ಪದವಿಪೂರ್ವ ಕಾಲೇಜು, ಪ್ರೌಢಶಾಲೆ, ಕನ್ನಡ ಪಂಡಿತ ತರಬೇತಿ ಸಂಸ್ಥೆ, ಉನ್ನತ ಪ್ರಾಥಮಿಕ ಶಾಲೆ, ಪ್ರಾಥಮಿಕ ಮತ್ತು ಪೂರ್ವ ಪ್ರಾಥಮಿಕ ಶಾಲೆ, ಅಂಧ ಮಕ್ಕಳ ಶಾಲೆ, ಅಂಗವಿಕಲರ ಸಮನ್ವಯ ಶಿಕ್ಷ ಣ ಕೇಂದ್ರಗಳು ಸೇರಿದಂತೆ ಒಟ್ಟೂ 124 ನಾನಾ ಮಾದರಿಯ ಶಾಲೆ, ಕಾಲೇಜುಗಳನ್ನು ಸ್ಥಾಪಿಸಿ ಜ್ಞಾನ ದಾಸೋಹದಲ್ಲಿ ವಿಕ್ರಮ ಮೆರೆದರು.

ನಿತ್ಯವೂ ನಸುಕಿನಲ್ಲಿ ಮತ್ತು ಮುಸ್ಸಂಜೆಯಲ್ಲಿ ಶ್ರೀಗಳ ಸಮ್ಮುಖದಲ್ಲಿ ಮಕ್ಕಳು ಸಾಮೂಹಿಕ ಪ್ರಾರ್ಥನೆ ಮಾಡುತ್ತಾರೆ. ಮಕ್ಕಳ ಸಾಮೂಹಿ ಭೋಜನ ಪಂಕ್ತಿಯಲ್ಲಿ ಶ್ರೀ ಶಿವಕುಮಾರ ಸ್ವಾಮೀಜಿಗಳು ಖುದ್ದಾಗಿ ಓಡಾಡಿ ‘ಚನ್ನಾಗಿ ಉಣ್ಣಬೇಕು : ಚನ್ನಾಗಿ ಓದಬೇಕು’ ಎಂದು ಹೇಳಿ ಮಕ್ಕಳನ್ನು ಹುರಿದುಂಬಿಸುತ್ತಿದ್ದರು. ಮಕ್ಕಳ ಪ್ರೀತಿಗೆ ಮಾರು ಹೋಗಿದ್ದರು.

ವಸತಿಯೇ ಒಂದು ದಾಸೋಹ

ಸರ್ವ ಧರ್ಮೀಯ ಉಚಿತ ವಿದ್ಯಾರ್ಥಿ ನಿಲಯ: ಅಚ್ಚರಿ ಮೂಡಿಸುವ ಹಾಗೂ ಶ್ರೀ ಮಠದ ಬಹುಮುಖ್ಯ ಆಕ್ಷ ರ್ಷಣೆ ವಿದ್ಯಾರ್ಥಿಗಳ ಉಚಿತ ವಿದ್ಯಾರ್ಥಿ ನಿಲಯ. ಶ್ರೀ ಉದ್ದಾನ ಶಿವಯೋಗಿಗಳಿಂದ 1917ರಲ್ಲಿ ಆರಂಭವಾದ ಶ್ರೀ ಸಿದ್ಧಲಿಂಗೇಶ್ವರ ಉಚಿತ ವಿದ್ಯಾರ್ಥಿ ನಿಲಯದಲ್ಲಿ ನಾನಾ ಕೋಮಿನ 40 ಮಂದಿ ವಿದ್ಯಾರ್ಥಿಗಳಿದ್ದರು.

ಪ್ರತಿಯೊಬ್ಬ ಮಕ್ಕಳನ್ನು ಅಕ್ಕರೆಯಿಂದ ನೋಡಿಕೊಳ್ಳುತ್ತಿದ್ದ ಶಿವಯೋಗಿಗಳು ಯುಗಾದಿ ಹಬ್ಬದಲ್ಲಿ ಹೆಚ್ಚಿಗೆ ಹೋಳಿಗೆ ತಿಂದವರಿಗೆ ಬಹುಮಾನ ಕೊಡುತ್ತಿದ್ದರು. ಮಕ್ಕಳ ಮೇಲೆ ಅದೆಂಥ ಪ್ರೀತಿ ಅಲ್ಲವೆ.

ಶ್ರೀ ಶಿವಕುಮಾರ ಸ್ವಾಮೀಜಿಗಳ ಕಾಲದಲ್ಲಿ ವಿದ್ಯಾರ್ಥಿಗಳ ಸಂಖ್ಯೆ ದಿನೆ ದಿನೆ ಹೆಚ್ಚತೊಡಗಿತು. ಯಶಸ್ವಿಯಾಗಿ 25 ವರ್ಷ ನಡೆದುಕೊಂಡು ಬಂದ ನಿಲಯ 1949ರಲ್ಲಿ ಸಂಸ್ಕೃತ ಕಾಲೇಜಿನ ಜತೆ ಸಾಂಕೇತಿಕವಾಗಿ ಬೆಳ್ಳಿಹಬ್ಬ ಆಚರಿಸಿಕೊಂಡಿತು. ಯಾರೇ ಬಂದು ತಮ್ಮ ಪರಿಸ್ಥಿತಿ ಹೇಳಿಕೊಂಡಾಗ ಇಲ್ಲವೆಂದು ಹೇಳಿ ಹಿಂದಕ್ಕೆ ಕಳಿಸುವ ಮನಸ್ಸು ಶ್ರೀಗಳಿಗೆ ಬಾರದೆ ಮಕ್ಕಳ ಸಂಖ್ಯೆ ಬೆಳೆಯುತ್ತಲೇ ಹೋಯಿತು. 1972ರಲ್ಲಿ ಸುವರ್ಣ ಮಹೋತ್ಸವ ಆಚರಿಸಿಕೊಂಡಿತು.

ಶ್ರೀಗಳ ಅವಿತರ ದುಡಿಮೆಯ ಫಲವಾಗಿ ಅಧಿಕಗೊಂಡ ಮಕ್ಕಳಿಗೆ ಭವ್ಯ ವಸತಿ ಮಂದಿರಗಳು ನಿರ್ಮಾಣಗೊಂಡವು. ಇಂದು ನಾನಾ ಕೋಮಿನ 8 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿರುವ ವಸತಿ ನಿಲಯವೆನಿಸಿ ದಾಖಲೆ ಸ್ಥಾಪಿಸಿದೆ.

2007ರಲ್ಲಿ ಕರ್ನಾಟಕ ಸರಕಾರ ನೀಡಿದ 10 ಕೋಟಿ ರೂ.ಗೂ. ಅಧಿಕ ಅನುದಾನ ಮತ್ತು ಭಕ್ತರ ಸಹಕಾರದಿಂದ ಮಠದ ಅವರಣದಲ್ಲಿ ಹಲವು ಬೃಹತ್‌ ವಿದ್ಯಾರ್ಥಿ ನಿಲಯಗಳು ನಿರ್ಮಾಣಗೊಂಡಿದ್ದು, ವಸತಿ ವ್ಯವಸ್ಥೆಗೆ ಆನೆ ಬಲ ಬಂದಿದೆ.

ರೈತರ ಆಶಾಕಿರಣವಾದ ಶಿವಕುಮಾರ ಸ್ವಾಮೀಜಿ

ವಸ್ತು ಪ್ರದರ್ಶನ: ಗ್ರಾಮಾಂತರ ಪ್ರದೇಶದ ಜನರ ಜೀವನ ಮಟ್ಟ ಉತ್ತಮಗೊಳಿಸಲು ಸಂಕಲ್ಪಮಾಡಿದ ಶ್ರೀ ಶಿವಕುಮಾರ ಸ್ವಾಮೀಜಿಯವರು, ಶಿವರಾತ್ರಿಯಲ್ಲಿ ನೆರವೇರುವ ಜಾತ್ರಾ ಮಹೋತ್ಸವ ಸಂದರ್ಭದಲ್ಲಿ ಗ್ರಾಮಾಂತರ ಜನ ಜೀವನಕ್ಕೆ ಅಗತ್ಯವಾದ ವ್ಯವಸಾಯ ಮತ್ತು ಕೈಗಾರಿಕೆಗಳ ಜ್ಞಾನವನ್ನುಂಟು ಮಾಡಿಕೊಡಲು ಒಂದು ವಸ್ತು ಪ್ರದರ್ಶನ ಅರಂಭಿಸಿದರು.

ಮಠದ ಹಳೆ ವಿದ್ಯಾರ್ಥಿಗಳ ಸಂಘ 1963ರಲ್ಲಿ ಪ್ರದರ್ಶನದ ಜವಾಬ್ದಾರಿ ಹೊತ್ತುಕೊಂಡಿತು. ಜಾತ್ರೆಗೆ ಬರುವವರಿಗೆ ಇದೊಂದು ಆಕರ್ಷಣೆಯಾಯಿತು. ಪ್ರತಿ ವರ್ಷ ಲಕ್ಷಾಂತರ ಮಂದಿ ಈ ಪ್ರದರ್ಶನವನ್ನು ಲಕ್ಷಾಂತರ ಜನ ವೀಕ್ಷಿಸಲಾರಂಭಿಸಿದರು. ವ್ಯವಸಾಯ, ಕೈಗಾರಿಕೆ, ಕುಶಲಕಲೆ, ವಾಣಿಜ್ಯ, ವಿಜ್ಞಾನ, ಆರೋಗ್ಯ, ಭೂಗೋಳ, ಸಾಂಸ್ಕೃತಿಕ, ರಾಜಕೀಯ, ಮನರಂಜನೆಗಳು ಮತ್ತಿತರ ಬಹುಮುಖ ಜ್ಞಾನ ಜನರನ್ನು ತಲುಪುವ ಮಾರ್ಗವಾಯಿತು. ದೇಶದ ಅನೇಕ ಗಣ್ಯರು ಈ ಪ್ರದರ್ಶನ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ವಸ್ತು ಪ್ರದರ್ಶನಕ್ಕೆಂದೇ ಕಾಯಂ ಕಟ್ಟಡಗಳು ನಿರ್ಮಾಣಗೊಂಡಿವೆ.