Shivakumara Swamiji History PART-03

Siddaganga Swamiji: ಸಿದ್ಧಗಂಗೆಯ ಮಹಾಪುರುಷ ಡಾ. ಶಿವಕುಮಾರ ಸ್ವಾಮೀಜಿ ಶಿವೈಕ್ಯ, ಶೋಕ ಸಾಗರದಲ್ಲಿ ಭಕ್ತಕೋಟಿ
ನಡೆದಾಡುವ ದೇವರೆಂದೇ ಖ್ಯಾತರಾದ ತ್ರಿವಿಧ ದಾಸೋಹಿ, ಶತಾಯುಷಿ, ಸಿದ್ಧಗಂಗಾ ಮಠಾಧೀಶ ಡಾ. ಶಿವಕುಮಾರ ಸ್ವಾಮೀಜಿ ಅವರು ಭಕ್ತಕೋಟಿಯ ಪ್ರಾರ್ಥನೆಯ ನಡುವೆಯೇ
ತುಮಕೂರು: ಸಿದ್ಧಗಂಗಾ ಮಠದ ಹಿರಿಯ ಶ್ರೀ ಡಾ.ಶಿವಕುಮಾರ ಸ್ವಾಮಿಗಳು ಶಿವೈಕ್ಯರಾದರು. ಶ್ರೀಗಳು ಶಿವೈಕ್ಯರಾದ ದುಃಖ ವಾರ್ತೆಯನ್ನುಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರು ಸೋಮವಾರ ಮಧ್ಯಾಹ್ನ 2.ಗಂಟೆಗೆ ಘೋಷಣೆ ಮಾಡಿದರು. ಶ್ರೀಗಳು ಸೋಮವಾರ ಬೆಳಗ್ಗೆ 11.44 ಕ್ಕೆ ಶಿವಸಾಯುಜ್ಯಗೊಂಡರು. ಮಂಗಳವಾರ ಮಧ್ಯಾಹ್ನ 3 ಗಂಟೆ ವರೆಗೆ ಶ್ರೀಗಳ ಅಂತಿಮ ದರ್ಶನಕ್ಕೆ ಮಠದ ಆವರಣದಲ್ಲಿ ಅವಕಾಶ ಮಾಡಿಕೊಡಲಾಗುವುದು.
ಸಿದ್ದಗಂಗಾ ಶ್ರೀಗಳ ನಿಧನ ಸುದ್ದಿ ತಿಳಿಯುತ್ತಿದ್ದಂತೆ ತುಮಕೂರು ಕಡೆಗೆ ಭಕ್ತ ಸಾಗರವೇ ಹರಿದು ಬಂತು.
ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಸುತ್ತೂರು ಮಠದ ಶ್ರೀಗಳು, ಆರ್ಟ್ ಆಫ್ ಲಿವಿಂಗ್‌ನ ಶ್ರೀ ಶ್ರೀ ರವಿಶಂಕರ್ ಗುರೂಜಿ, ಸಚಿವರು, ರಾಜಕೀಯ ನಾಯಕರು, ಉದ್ಯಮಿಗಳು, ರಾಜ್ಯದ ಹಲವು ಮಠಗಳ ಸ್ವಾಮೀಜಿಗಳು ತುಮಕೂರು ಸಿದ್ದಗಂಗಾ ಮಠಕ್ಕೆ ಆಗಮಿಸಿ ಅಂತಿಮ ದರ್ಶನ ಪಡೆದರು.
ಶಿವಕುಮಾರ ಶ್ರೀ ಅಂತಿಮ ದರ್ಶನಕ್ಕೆ ಹರಿದು ಬಂದ ಜನಸಾಗರ
ಲಕ್ಷಾಂತರ ಮಂದಿ ಈಗಾಗಲೇ ಶ್ರೀಗಳ ಅಂತಿಮ ದರ್ಶನ ಪಡೆದಿದ್ದಾರೆ. ಮಂಗಳವಾರ ಸಂಜೆ ಕ್ರಿಯಾ ಸಮಾಧಿ ನಡೆಯಲಿದೆ ಎಂದು ಮಠದ ಮೂಲಗಳು ತಿಳಿಸಿವೆ.
ಪ್ರಧಾನಿ ಮೋದಿ ಆಗಮನ ಅನುಮಾನ?
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಶ್ರೀಗಳಿಗೆ ಅಂತಿಮ ನಮನ ಸಲ್ಲಿಸುವ ಬಗ್ಗೆ ಇನ್ನೂ ಅನುಮಾನ ವ್ಯಕ್ತವಾಗಿದೆ.
ಮಂಗಳವಾರ ಬೆಳಗ್ಗೆ ಹೊಸದಿಲ್ಲಿಯಿಂದ ಬೆಂಗಳೂರಿಗೆ ಆಗಮಿಸಿ ನಂತರ ಹೆಲಿಕಾಪ್ಟರ್ ಮೂಲಕ ತುಮಕೂರು ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ಸಿದ್ದಗಂಗಾ ಶ್ರೀಗಳಿಗೆ ಅಂತಿಮ ಗೌರವ ಸಲ್ಲಿಸಲಿದ್ದಾರೆ ಎಂದು ಮೊದಲು ತಿಳಿಸಲಾಗಿತ್ತು. ಆದರೆ ಭದ್ರತಾ ಪಡೆಗಳಿಂದ ಇನ್ನೂ ಹಸಿರು ನಿಶಾನೆ ಸಿಗದ ಕಾರಣ ಮೋದಿ ಆಗಮನದ ಬಗ್ಗೆ ಇನ್ನೂ ಖಚಿತತೆ ಮೂಡಿಲ್ಲ.
ಏನಾಗಿತ್ತು?:
ಸಿದ್ಧಗಂಗಾ ಶ್ರೀಗಳಿಗೆ ಪಿತ್ತಕೋಶದಲ್ಲಿ ಬ್ಲಾಕ್ ಆಗುತ್ತಿದ್ದ ಕಾರಣ ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ನಡೆಸಿ ಮೇ 16, 2016 ರಂದು ಸ್ಟೆಂಟ್ ಅಳವಡಿಸಲಾಗಿತ್ತು. ಕ್ರಮೇಣ ಈ ಸ್ಟೆಂಟ್ ಗಳು ಸಡಿಲವಾಗಿ ಶ್ವಾಸಕೋಶದಲ್ಲಿ ಸೋಂಕು ಕಾಣಿಸಿಕೊಳ್ಳುತ್ತಿದ್ದರಿಂದ ಆಗಾಗ ಚಿಕಿತ್ಸೆ ನೀಡಿ ಒಟ್ಟು 11 ಸ್ಟೆಂಟ್ ಗಳನ್ನು ಅಳವಡಿಸಲಾಗಿತ್ತು.
ಪುನಃ ಸೋಂಕು ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ 2018 ಡಿ.8 ರಂದು ಚೆನ್ನೈನ ರೆಲಾ ಆಸ್ಪತ್ರೆಯಲ್ಲಿ ಬೈಪಾಸ್ ಸರ್ಜರಿ ಮಾಡಲಾಗಿತ್ತು. ಯಶಸ್ವಿ ಶಸ್ತ್ರಚಿಕಿತ್ಸೆ ಬಳಿಕ ಶ್ರೀಗಳು ಡಿ.19 ರಂದು ಮಠಕ್ಕೆ ಮರಳಿದ್ದರು. ಸೋಂಕು ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ 2019ರ ಜ.3 ರಂದು ಶ್ರೀಗಳನ್ನು ತುಮಕೂರಿನ ಸಿದ್ಧಗಂಗಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಜ.16 ರ ಬೆಳಗ್ಗಿನ ಜಾವ 3.50ಕ್ಕೆ ಶ್ರೀಗಳನ್ನು ಮಠಕ್ಕೆ ಕರೆತಂದು ಅವರ ಇಚ್ಛೆಯಂತೆ ಹಳೆ ಮಠದಲ್ಲಿ ಚಿಕಿತ್ಸೆ ಮುಂದುವರೆಸಲಾಗಿತ್ತು.
ಮಠದಲ್ಲಿ ಬಿಗಿ ಪೊಲೀಸ್ ಭದ್ರತೆ
ಮಠದ ಆವರಣದಲ್ಲಿ ಹಿಂದೆಂಗಿಂತಲೂ ಬಿಗಿ ಪೊಲೀಸ್ ಭದ್ರತೆ ಮಾಡಿಕೊಳ್ಳಲಾಗಿದೆ. ಐಜಿಪಿ ದಯಾನಂದ್ ನೇತೃತ್ವದಲ್ಲಿ ಎಸ್ಪಿಗಳಾದ ತುಮಕೂರು ಎಸ್‌ಪಿ ಕೋನ ವಂಶಿ ಕೃಷ್ಣ, ತುಮಕೂರಿನ ಹಿಂದಿನ ಎಸ್‌ಪಿ ಡಾ.ದಿವ್ಯಾ ವಿ.ಗೋಪಿನಾಥ್, ಚಿಕ್ಕಬಳ್ಳಾಪುರ ಎಸ್ಪಿ ಕಾರ್ತಿಕ್ ರೆಡ್ಡಿ ಸೇರಿದಂತೆ 6 ಮಂದಿ ಎಸ್‌ಪಿ ಸೇರಿದಂತೆ ಸಾವಿರಕ್ಕೂ ಅಧಿಕ ಪೊಲೀಸರನ್ನು ಮಠದ ಪರಿಸರ, ಸುತ್ತಮುತ್ತಲಿನ ಆಯಕಟ್ಟಿನ ಪ್ರದೇಶಗಳಲ್ಲಿ ನಿಯೋಜಿಸಲಾಗಿದೆ.
ಸಾರ್ವಜನಿಕರಿಗೆ ನಿರ್ಬಂಧ
ಬೆಳಗ್ಗೆ ಹತ್ತು ಗಂಟೆಗೆಲ್ಲಾ ಮಠದ ಮುಖ್ಯ ದ್ವಾರ ಬಂದ್ ಮಾಡಲಾಯಿತು. ಬಳಿಕ ಮಠಕ್ಕೆ ಪ್ರವೇಶಿಸಲು ಸಾರ್ವಜನಿಕರ ನೂಕುನುಗ್ಗಲು ಉಂಟಾಯಿತು. ಶ್ರೀಗಳ ದರ್ಶನ ಪಡೆಯಲು ತುಮಕೂರು ಸೇರಿದಂತೆ ನಾನಾ ಕಡೆಯಿಂದ ಭಕ್ತರು ಆಗಮಿಸಿದರು. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಂತೆ ಮಠದ ಮುಖ್ಯ ದ್ವಾರದಲ್ಲಿ ಜನರ ನಿಯಂತ್ರಿಸಲು ಪೊಲೀಸರ ಹರಸಾಹಸ ಪಟ್ಟರು. ಸರಕಾರಿ ವಾಹನ, ಮಠದ ಸಿಬ್ಬಂದಿಗಷ್ಟೆ ಪ್ರವೇಶ ನೀಡಲಾಯಿತು. ಬ್ಯಾರಿಕೇಡ್, ಪೆಂಡಲ್ ವಾಹನಗಳಿಗಷ್ಟೆ ಅನುವು ಮಾಡಿಕೊಡಲಾಯಿತು. ಜೆಸಿಬಿಗಳಿಂದ ಮೈದಾನ ಶುಚಿಗೊಳುಸುವ ಕಾರ್ಯ ಮಧ್ಯಾಹ್ನದ ವೇಳೆಗೆ ಆರಂಭಗೊಂಡಿತು. ಮೈದಾನದ ಸ್ಟೇಜ್ ಬಳಿ ಜನರ ಓಡಾಟಕ್ಕೆ ನಿರ್ಬಂಧ ವಿಧಿಸಿದ ಪೊಲೀಸರು ಸರ್ಪಗಾವಲು ಹೇರಿದರು.
ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ, ಗೃಹಸಚಿವ ಎಂ.ಬಿ ಪಾಟೀಲ್, ಬಿಜೆಪಿ ಮುಖಂಡ ವಿ. ಸೋಮಣ್ಣ ಅವರು ವೇದಿಕೆಯಲ್ಲಿ ಸಿದ್ದತೆ ಪರಿಶೀಲನೆ ನಡೆಸಿದ್ದಾರೆ.
ಬೃಹತ್ ಮೈದಾನದಲ್ಲಿ ವಾಹನಗಳ ಪಾರ್ಕಿಂಗ್ ಸಿದ್ಧತೆ:
ಮಠದ ಪಕ್ಕದ ಬೃಹತ್ ಮೈದಾನದಲ್ಲಿ ಪಾರ್ಕಿಂಗ್ ವ್ಯವಸ್ಥೆಗೆ ಸಿದ್ಧತೆ ಮಾಡಲಾಗಿದೆ. ಶ್ರೀಗಳ ಅಂತಿಮ ದರ್ಶನ ಪಡೆಯಲು ಬರುವ ಭಕ್ತರಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗುತ್ತಿದೆ. ಈಗಾಗಲೇ 100 ಕ್ಕೂ ಅಧಿಕ ಕುಡಿಯುವ ನೀರಿನ ನಲ್ಲಿಗಳನ್ನು ಹಾಕಲಾಗಿದೆ. ಗೇಟ್ ಮುಂದೆ ಭಕ್ತರ ದಂಡೇ ಸೇರಿದೆ. ಯಾರನ್ನೂ ಮಠದ ಒಳಗೆ ಪೊಲೀಸರು ಬಿಡುತ್ತಿಲ್ಲ. ಹಾಗಾಗಿ ಬಾಗಿಲು ಮುಂದೆಯೇ ಭಕ್ತರು ಬಿಸಿಲನ್ನು ಲೆಕ್ಕಿಸದೇ ಕಾದು ನಿಂತಿದ್ದಾರೆ.
ಹೊರಭಾಗದಲ್ಲೊಂದು ಎಲ್ ಇಡಿ:
ಮಠದ ಹೊರಭಾಗದಲ್ಲಿಯೂ ಎಲ್ ಇಡಿ ಹಾಕಲು ಸಿದ್ದತೆ ಮಾಡಲಾಗಿದೆ. ಎಲ್ಇಎಡಿ ಹೊತ್ತು ಬಂದ ಕ್ಯಾಂಟರ್ ನ್ನು ಮೈದಾನದಲ್ಲಿ ನಿಲ್ಲಿಸಲಾಗಿದೆ.